ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಮೆಸ್ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾನ್ ಸ್ಟೇಬಲ್ ಮನೋಜ್ ಕುಮಾರ್ ಎಂಬುವರು ದಾಲ್, ರೊಟ್ಟಿ ಮತ್ತು ಅನ್ನದ ತಟ್ಟೆಯನ್ನು ಹೊತ್ತುಕೊಂಡು ರಸ್ತೆಯಲ್ಲಿ ಅಳುತ್ತಿರುವಾಗ ಹಿರಿಯ ಅಧಿಕಾರಿಯೊಬ್ಬರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ ಎಂದು ಅವರು ದೂರಿದರು.
ನಮ್ಮೆಲ್ಲರಿಗೂ ಮೆಸ್ನಲ್ಲಿ ನೀರಿನ ದಾಲ್ ಮತ್ತು ಬೇಯಿಸದ ರೊಟ್ಟಿಗಳನ್ನು ನೀಡಲಾಗುತ್ತದೆ. ಪೊಲೀಸ್ ಸಿಬ್ಬಂದಿಗೆ ಪೌಷ್ಠಿಕ ಆಹಾರ ನೀಡುವುದಾಗಿ ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಸಿಎಂ ಘೋಷಿಸಿದ್ದರು. ಆದರೆ 12 ಗಂಟೆಗಳ ಕರ್ತವ್ಯದ ನಂತರ ನಮಗೆ ಸಿಗುವುದು ಇದೇ. ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಕಾನ್ಸ್ಟೆಬಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನೊಂದು ವಿಡಿಯೊದಲ್ಲಿ, ತಟ್ಟೆಯಲ್ಲಿ ಆಹಾರದೊಂದಿಗೆ ಕಾಣಿಸಿಕೊಂಡಿದ್ದು “ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ” ಎಂದು ಜನರಿಗೆ ಹೇಳುತ್ತಿದ್ದಾರೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿದ್ದು, ಸರ್ಕಾರವನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.