ಬೆಂಗಳೂರು: ವಿದ್ಯಾರ್ಥಿಗಳಿಗೆ ಸರಳ, ಪರಿಣಾಮಕಾರಿಯಾಗಿ ಪಠ್ಯ ಅರ್ಥೈಸಲು ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI) ಅಳವಡಿಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ಮೈಕ್ರೋಸಾಫ್ಟ್ ರೂಪಿಸಿದ ‘ಶಿಕ್ಷಾ ಕೋಪೈಲಟ್’ ಎಂಬ ತಂತ್ರಾಂಶದ ಮೂಲಕ ಶಿಕ್ಷಕರು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅನುಕೂಲವಾಗಲಿದೆ.
ಅರ್ಥವಾಗದ ಸಂಗತಿಗಳನ್ನು ವಿದ್ಯಾರ್ಥಿಗಳು ಗ್ರಾಫಿಕ್ ಮೂಲಕ ನೋಡಬಹುದು. ಪ್ರಶ್ನೆಗಳಿಗೆ ಕೃತಕ ಬುದ್ಧಿಮತ್ತೆ ನೆರವಿನಿಂದ ಉತ್ತರ ಪಡೆದುಕೊಳ್ಳಬಹುದಾಗಿದೆ. ಗಣಿತ, ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ನೋಡಿ, ಕೇಳಿ ಕಲಿಯುವುದರಿಂದ ನೆನಪಿನಲ್ಲಿ ಉಳಿಯುತ್ತದೆ. ಒಟ್ಟಾರೆ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಯಾಗಲಿದೆ.
ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮೈಕ್ರೋಸಾಫ್ಟ್ ಕಂಪನಿ ಬೆಂಗಳೂರು ಹೊರವಲಯದ ಅತ್ಯುತ್ತಮ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ತಂತ್ರಾಂಶ ಬಳಕೆಗೆ ಅನುಮತಿ ನೀಡಿದೆ. ಶಿಕ್ಷಕರು ಈಗಾಗಲೇ ತಂತ್ರಜ್ಞಾನ ಬಳಸುತ್ತಿದ್ದು, ವಿದ್ಯಾರ್ಥಿಗಳು ಎಐ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.
ಈ ಕೃತಕ ಬುದ್ಧಿಮತ್ತೆ ಸಹಾಯದಿಂದ ಶಿಕ್ಷಕರು ಕ್ಷಣಾರ್ಧದಲ್ಲಿ ಅಧ್ಯಯನ ಯೋಜನೆ ರೂಪಿಸಬಹುದಾಗಿದೆ. ಪಠ್ಯಕ್ಕೆ ಪೂರಕವಾದ ಅಂಶಗಳನ್ನು ರೂಪಿಸಿ ಮಕ್ಕಳಿಗೆ ಕಳುಹಿಸಬಹುದು. ರಾಜ್ಯ ಪಠ್ಯದ ಕ್ರಮದ ಮಾಹಿತಿ ಅಪ್ಲೋಡ್ ಮಾಡಿರುವುದರಿಂದ ಕನ್ನಡ ಭಾಷೆಯಲ್ಲಿಯೂ ಇದು ಲಭ್ಯವಾಗಲಿದೆ.