ಪ್ರಸ್ತುತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಮಾನವ ಉದ್ಯೋಗವನ್ನು ಕಸಿದುಕೊಳ್ಳಬಹುದು ಎಂಬ ಭೀತಿಯೂ ಕಾಡುತ್ತಿದೆ. ಇದರ ಮಧ್ಯೆ ಕೃತಕ ಬುದ್ಧಿಮತ್ತೆ ನೆರವಿನಿಂದ ಮಾಡಿದ ಸಂಶೋಧನೆ ಕುರಿತು ಬ್ರಿಟನ್ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಯಂತ್ರ ಬಳಸಿ ಮಾಡಿರುವ ಸಂಶೋಧನೆಗೆ ‘ಪೇಟೆಂಟ್’ ನೀಡದಿರುವ ಬ್ರಿಟನ್ ಬೌದ್ಧಿಕ ಹಕ್ಕು ಕಚೇರಿ (ಐಪಿಓ) ತೀರ್ಮಾನವನ್ನು ಎತ್ತಿ ಹಿಡಿದಿರುವ ಅಲ್ಲಿನ ಸುಪ್ರೀಂ ಕೋರ್ಟ್, ಕೃತಕ ಬುದ್ಧಿಮತ್ತೆ ಅಥವಾ ಯಂತ್ರದ ನೆರವಿನಿಂದ ಮಾಡಿದ ಸಂಶೋಧನೆಗೆ ಪೇಟೆಂಟ್ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ಪ್ರಕಟಿಸಿದೆ.
ಯಾವುದೇ ಸಂಶೋಧನೆಗೆ ಸಂಬಂಧಿಸಿದಂತೆ ‘ಪೇಟೆಂಟ್’ ಪಡೆಯಲು ಮಾನವ ಅಥವಾ ಸಂಸ್ಥೆ ಮೂಲಕ ಸಂಶೋಧನೆ ಮಾಡಿರಬೇಕು. ಕೃತಕ ಬುದ್ಧಿಮತ್ತೆಯನ್ನು ಸಂಶೋಧಕ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದು, ಈ ತೀರ್ಪಿನಿಂದಾಗಿ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ಯಂತ್ರ ಬಳಸಿ ಮಾಡಿರುವ ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಸ್ಟೀಫನ್ ಟೇಲರ್ ಅವರಿಗೆ ಹಿನ್ನಡೆಯಾಗಿದೆ.
ವಿಜ್ಞಾನಿ ಸ್ಟೀಫನ್ ಅವರು ತಮ್ಮ ಸಂಶೋಧನೆಗೆ ಪೇಟೆಂಟ್ ಕೋರಿ ಬ್ರಿಟನ್ ಬೌದ್ಧಿಕ ಹಕ್ಕು ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಆದರೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಮಾಡಿರುವ ಸಂಶೋಧನೆಯಾಗಿರುವ ಕಾರಣ ಪೇಟೆಂಟ್ ನೀಡಲು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಅಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ.