ಎಲ್ಲಾ ಅರ್ಹತಾ ಮಾನದಂಡಗಳ ಪೂರೈಕೆ ಬಳಿಕವೂ ಖಾಯಂ ಉದ್ಯೋಗ ನೀಡಲು ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 11 ಮಂದಿ ಮಹಿಳೆಯರಿಗೆ ಶಾಶ್ವತ ಆಯೋಗವನ್ನು ನೀಡುವುದಾಗಿ ಭಾರತೀಯ ಸೇನೆಯು ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ನ್ಯಾಯಾಂಗದ ನಿರ್ಧಾರಗಳನ್ನು ಅವಮಾನಿಸಿದಲ್ಲಿ ಸೇನಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆಯೇ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಸುಪ್ರೀಂ ಕೋರ್ಟ್ನ ಎಚ್ಚರಿಕೆಯ ಬಳಿಕ ಮಹಿಳಾ ಅಧಿಕಾರಿಗಳ ಹುದ್ದೆ ಖಾಯಂಗೊಳಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಭಾರತೀಯ ಸೇನೆ ಹೇಳಿದೆ. ನವೆಂಬರ್ 26ರರ ಒಳಗಾಗಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ.
ಇದರ ಜೊತೆಯಲ್ಲಿ, ಮಹಿಳಾ ಶಾರ್ಟ್ ಸರ್ವೀಸ್ ಕಮೀಷನ್ಡ್ ಆಫೀಸರ್ಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಷ್ಪಕ್ಷಪಾತ ಕ್ರಮ ಕೈಗೊಂಡ ಸೇನಾ ಅಧಿಕಾರಿಗಳ ನಡೆಯನ್ನೂ ನ್ಯಾಯಪೀಠ ಪ್ರಶಂಸಿಸಿದೆ.
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಖಾಯಂ ಆಯೋಗ ಒದಗಿಸುವಂತೆ ಸೂಚನೆ ನೀಡಿತ್ತು. ಅಲ್ಲದೇ ಈ ಅಧಿಕಾರಿಗಳು ಇನ್ಮುಂದೆ ಕಮಾಂಡ್ ಹುದ್ದೆಗೆ ಅರ್ಹರಾಗಿದ್ದಾರೆ ಎಂದೂ ಹೇಳಿತ್ತು. ಸೇನೆಯ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ಮೂರು ತಿಂಗಳ ಒಳಗಾಗಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.