ಸರಳ ಸಜ್ಜನಿಕೆಯ ನಟ ಪುನೀತ್ ರಾಜ್ಕುಮಾರ್ ನಿಧನದಿಂದ ಸಂಪೂರ್ಣ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿಯೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನೆರವೇರಲಿದ್ದು ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಪುನೀತ್ ರಾಜ್ಕುಮಾರ್ರ ಸಂಬಂಧಿಯಲ್ಲ, ಆತ್ಮೀಯರಲ್ಲ, ಭೇಟಿಯಾದದ್ದೂ ಇಲ್ಲ. ಆದರೂ ಸಹ ಕರುನಾಡಿನ ಅದೆಷ್ಟೋ ಮನೆಗಳು ಇಂದು ಅಪ್ಪುವಿಗಾಗಿ ಟಿವಿ ಮುಂದೆ ಕುಳಿತು ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ವೃದ್ಧರು ಪುನೀತ್ ಬದಲು ಆ ದೇವರು ನಮ್ಮನಾದರೂ ಕರೆದುಕೊಂಡು ಹೋಗಬಾರದಿತ್ತೇ ಎಂದು ಹೇಳ್ತಿದ್ರೆ ಅದೆಷ್ಟೋ ತಾಯಂದಿರು ಹಿರಿ ಮಗನನ್ನೇ ಕಳೆದುಕೊಂಡಂತೆ ಅಳುತ್ತಿದ್ದಾರೆ.
ಇದೇ ರೀತಿ ಪುಟ್ಟ ಮಗುವೊಂದು ಪುನೀತ್ ರಾಜ್ಕುಮಾರ್ಗಾಗಿ ರೋಧಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪುನೀತ್ ಸತ್ತಿಲ್ಲ, ಇನ್ನೂ ಇದಾರೆ ಎಂದು ಮನೆಯವರು ಸಮಾಧಾನ ಮಾಡುತ್ತಿದ್ದರೂ ಸಹ ಪುಟ್ಟ ಮಗುವೊಂದು ನನಗೆ ಪುನೀತ್ ಅಣ್ಣ ಬೇಕೆಂದು ರೋಧಿಸುತ್ತಿರುವ ದೃಶ್ಯ ಕರಳುಹಿಂಡುವಂತಿದೆ.
ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಾಳೆ ಮುಂಜಾನೆಯೇ ನಡೆಸುವ ಬಗ್ಗೆ ಕುಟುಂಬಸ್ಥರು ತೀರ್ಮಾನ ಕೈಗೊಂಡಿದ್ದಾರೆ. ರಾತ್ರಿಯ ವೇಳೆ ಅಭಿಮಾನಿಗಳ ಅಂತಿಮ ದರ್ಶನ ಪೂರ್ಣಗೊಂಡಲ್ಲಿ ಮುಂಜಾನೆಯೇ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿವೆ.
ಒಂದು ವೇಳೆ ಅಭಿಮಾನಿಗಳ ಅಂತಿಮ ದರ್ಶನಕ್ಕೆ ವಿಳಂಬವಾದಲ್ಲಿ ನಾಳೆ ಬೆಳಗ್ಗೆಯೂ ಸ್ವಲ್ಪ ಸಮಯ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಬಳಿಕ ಅಂತಿಮ ಕಾರ್ಯ ಕೈಗೊಳ್ಳುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ದಿವಂಗತ ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ರ ಸಮಾಧಿ ಪಕ್ಕದಲ್ಲಿಯೇ ಪುನೀತ್ ರಾಜ್ಕುಮಾರ್ರನ್ನು ಸಮಾಧಿ ಮಾಡಲು ಸಕಲ ತಯಾರಿ ಮುಂದುವರಿದಿದೆ.
https://youtu.be/E2W6R-5JIG4?t=20