ತಮಿಳು ಖ್ಯಾತ ನಟ ಮನ್ಸೂರ್ ಅಲಿ ಖಾನ್ ಪ್ರವಾಹದ ನೀರಿನಲ್ಲಿ ಹಾಡನ್ನು ಹಾಡುತ್ತಾ ತಾತ್ಕಾಲಿಕ ದೋಣಿಯಲ್ಲಿ ವಿಹಾರ ನಡೆಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬಾತ್ಟಬ್ನ್ನು ದೋಣಿಯ ರೀತಿಯಲ್ಲಿ ಬಳಸಿಕೊಂಡ ಮನ್ಸೂರ್ ಅಲಿ ಖಾನ್ ಪ್ರವಾಹದ ನೀರಿನಲ್ಲಿ ತಮ್ಮ ಮನೆಯ ಸುತ್ತ ದೋಣಿ ವಿಹಾರ ನಡೆಸಿದ ವಿಡಿಯೋ ಇದಾಗಿದೆ.
ಭಾರೀ ಮಳೆಯಿಂದಾಗಿ ಚೆನ್ನೈನ ಹಲವು ಭಾಗಗಳು ಜಲಾವೃತವಾಗಿದೆ. ಹೀಗಾಗಿ ಚೆನ್ನೈನಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಆದರೂ ಸಹ ಚೆನ್ನೈನ ಹಲವು ಭಾಗಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಈ ಹಿಂದೆ ಸುರಿದ ಮಳೆಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಚೆನ್ನೈನಲ್ಲಿ ಶುಕ್ರವಾರ ಭಯಾನಕ ಮಳೆಯಾಗಿದೆ. ಈಗಾಗಲೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಚೆನ್ನೈನಲ್ಲಿ ಪರಿಸ್ಥಿತಿ ಇದೀಗ ವಿಕೋಪಕ್ಕೆ ತಿರುಗಿದೆ.
ಚೆನ್ನೈನಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸುವ ಸಲುವಾಗಿ ನಟ ಮನ್ಸೂರ್ ಅಲಿ ಖಾನ್ ಈ ರೀತಿ ದೋಣಿ ವಿಹಾರ ನಡೆಸಿದ್ದಾರೆ. ಅಂದಹಾಗೆ ಅವರು ಈ ದೋಣಿ ವಿಹಾರವನ್ನು ನುಂಗಂಬಾಕ್ಕಂನ ತಮ್ಮ ನಿವಾಸದ ಎದುರೇ ಮಾಡಿದ್ದಾರೆ. ಚೆನ್ನೈನಲ್ಲಿ ನೀರಿನ ಪ್ರಮಾಣ ಅಷ್ಟರ ಮಟ್ಟಿಗೆ ಏರಿಕೆ ಕಂಡಿದೆ.
ಪ್ಯಾಡ್ಲಿಂಗ್ ಮಾಡುತ್ತಾ ಮನ್ಸೂರ್ ಅಲಿ ಖಾನ್ ತಮಿಳು ಹಾಡೊಂದನ್ನು ಹಾಡಿದ್ದಾರೆ. ಹುಟ್ಟಿದರೆ ತಮಿಳುನಾಡಿನಲ್ಲಿ ಹುಟ್ಟಿ ಚೆನ್ನೈನಲ್ಲಿ ತೇಲಬೇಕು ಎಂಬರ್ಥವನ್ನು ಈ ಹಾಡು ಹೊಂದಿದೆ.