ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹುದೊಡ್ಡ ಸಮಸ್ಯೆ. ಎಷ್ಟೇ ಕಾಳಜಿ, ಆರೈಕೆ ಮಾಡಿದ್ರೂ ಮೊಡವೆಗಳೇಳುತ್ತವೆ. ಈ ಗುಳ್ಳೆಗಳಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಹಾರ್ಮೋನ್ ವ್ಯತ್ಯಾಸದಿಂದ್ಲೂ ಮೊಡವೆಗಳಾಗುತ್ತವೆ ಎನ್ನುತ್ತಾರೆ ವೈದ್ಯರು. ಕೆಲವೊಂದು ದುರಭ್ಯಾಸಗಳು ಕೂಡ ಮೊಡವೆ ಸಮಸ್ಯೆ ಹೆಚ್ಚಾಗಲು ಕಾರಣ.
ಮುಖವನ್ನು ಅತಿಯಾಗಿ ಉಜ್ಜುವುದು: ಕೆಲವರು ಕ್ಲೆನ್ಸಿಂಗ್ ಬ್ರಷ್ ಅನ್ನು ಅತಿಯಾಗಿ ಬಳಕೆ ಮಾಡುತ್ತಾರೆ. ಇದನ್ನು ದಿನವೂ ಬಳಸುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ರಂಧ್ರಗಳಲ್ಲಿ ಉರಿಯೂತ ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ವಾರಕ್ಕೆ ಎರಡು ಬಾರಿ ಮಾತ್ರ ಮುಖಕ್ಕೆ ಸ್ಕ್ರಬ್ ಮಾಡಬೇಕು.
ಸೌಂದರ್ಯ ಉತ್ಪನ್ನಗಳ ಬಳಕೆ: ಮೊಡವೆ ಇರುವವರು ಎಲ್ಲಾ ಬಗೆಯ ಕ್ಲೆನ್ಸರ್ ಮತ್ತು ಚಿಕಿತ್ಸಾ ಉತ್ಪನ್ನಗಳನ್ನು ಬಳಸಬಾರದು. ಯಾಕಂದ್ರೆ ನಿಮ್ಮ ಚರ್ಮಕ್ಕೆ ಅದು ಹೊಂದಿಕೆಯಾಗದೇ ಇರಬಹುದು. ತಜ್ಞರ ಸಲಹೆ ಮೇರೆಗೆ ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಒಳಿತು. ಅತಿಯಾಗಿ ಮುಖವನ್ನು ತೊಳೆಯಬೇಡಿ. ಇದರಿಂದ ಶುಷ್ಕತೆ ಹೆಚ್ಚಾಗುತ್ತದೆ.
ಮೊಡವೆ ಒಡೆಯುವ ಅಭ್ಯಾಸ: ಮೊಡವೆ ಎದ್ದಿದೆ ಅಂದಾಕ್ಷಣ ಆದಷ್ಟು ಬೇಗ ಅದನ್ನು ಒಡೆದು ಹಾಕಬೇಕೆಂಬ ತವಕ ಹೆಚ್ಚಾಗುತ್ತದೆ. ಈ ರೀತಿ ಮಾಡುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ. ಯಾಕಂದ್ರೆ ನಿಮ್ಮ ಕೈಬೆರಳುಗಳಲ್ಲಿರುವ ಬ್ಯಾಕ್ಟೀರಿಯಾ ಮೊಡವೆಯ ಗಾಯ ಸೇರಿಕೊಳ್ಳುತ್ತದೆ.
ಪದೇ ಪದೇ ಮುಖ ಮುಟ್ಟಿಕೊಳ್ಳುವುದು: ನಿಮ್ಮ ಕೈಗಳು ಎಷ್ಟೇ ಸ್ವಚ್ಛವಾಗಿದ್ದರೂ ಬ್ಯಾಕ್ಟೀರಿಯಾವನ್ನು ಹರಡುತ್ತವೆ. ಹೆಚ್ಚುವರಿಯಾಗಿ, ನಿಮ್ಮ ಬೆರಳುಗಳು ತೈಲವನ್ನು ನೈಸರ್ಗಿಕವಾಗಿ ಸ್ರವಿಸುತ್ತವೆ, ಆದ್ದರಿಂದ ನಿಮ್ಮ ಮುಖವನ್ನು ಸ್ಪರ್ಶಿಸುವುದರಿಂದ ಮುಖದಲ್ಲಿ ಎಣ್ಣೆಯ ಜಿಡ್ಡು ಹೆಚ್ಚಾಗುತ್ತದೆ. ಹಾಗಾಗಿ ಪದೇ ಪದೇ ಮುಖ ಮುಟ್ಟಿಕೊಳ್ಳಬೇಡಿ.