ಈ ವಿಡಿಯೋ ನೋಡಿ ಅಯ್ಯೋ ಎನಿಸಬಹುದು, ಕೊನೆಗೆ ಖುಷಿಯೂ ತರಿಸಬಹುದು. ಅಂತಹ ಒಂದು ಮನಮುಟ್ಟುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ಕ್ರೀಡಾಪಟು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ತನ್ನ ಗೆಳತಿಗೆ ಪ್ರಪೋಸ್ ಮಾಡುತ್ತಿರುವುದನ್ನು ಕಾಣಬಹುದು. ಆತ ಪ್ರಸ್ತಾವನೆ ಇಡುವವರೆಗೂ ಎಲ್ಲವೂ ಸರಿ ಇರುತ್ತದೆ,
ಇನ್ನೇನು ತನ್ನ ಅಭಿಲಾಷೆ ವ್ಯಕ್ತಮಾಡಬೇಕೆನ್ನುವ ಹೊತ್ತಿಗೆ ಆತನಿಂದ ಆರ್ತನಾದ ಹೊರಹೊಮ್ಮುತ್ತದೆ. ನೋವಿನ ಸೆಳೆತದಿಂದ ತನ್ನ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿ ಕೈಗೆ ಉಂಗುರ ತೊಡಿಸಬೇಕೆನ್ನುವಾಗ ಈ ರೀತಿ ಆಗಿ ಹೋಯಿತು. ಕೊನೆಗೆ ರಿಂಗ್ ವಾಪಸ್ ಇಟ್ಟುಕೊಳ್ಳಬೇಕಾಗುತ್ತದೆ, ನೆಲಕ್ಕೂ ಕುಸಿದುಬಿಡುತ್ತಾನೆ.
ಅವನ ಗೆಳತಿಗೆ ಆಘಾತ. ಆದರೆ, ಆತ ಹಠ ಬಿಡಲಿಲ್ಲ. ನೋವಿನ ನಡುವೆಯೂ ಇಬ್ಬರ ಸಹಾಯ ಪಡೆದು ರಿಂಗ್ ಕೊಟ್ಟೇಬಿಟ್ಟ. ಸಹಾಯಕ್ಕೆ ಬಂದವರು ಆತನ ಸ್ನಾಯುವನ್ನು ಉಜ್ಜಿ ಸಹಾಯ ಮಾಡಿದರು. ಆಕೆ ಪ್ರೇಮ ನಿವೇದನೆ ಒಪ್ಪಿಕೊಂಡಾಗ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಕೇಳಿಬಂತು. ಕೊನೆಯಲ್ಲಿ ಆ ಜೋಡಿ ಮುತ್ತಿಟ್ಟಿತು.
ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಅಥ್ಲೀಟ್ನ ಸಾಹಸ ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿಯೂ ಹುರಿದುಂಬಿಸಿದ್ದಾರೆ.