ಚಾಮರಾಜನಗರ: ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥ ದೇವಾಲಯದ ಹುಂಡಿ ಎಣಿಕೆ ವೇಳೆ ಭಕ್ತರು ದೇವರಿಗೆ ಬರೆದಿರುವ ಹಲವು ಪತ್ರಗಳು ಸಿಕ್ಕಿದ್ದು, ತರಹೇವಾರಿ ಬೇಡಿಕೆಗಳ ಮೂಲಕ ರಂಗನಾಥಸ್ವಾಮಿಗೆ ಮೊರೆ ಇಟ್ಟಿದ್ದಾರೆ.
ರಂಗನಾಥಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಹುಂಡಿ ಎಣಿಕೆ ವೇಳೆ ಭಕ್ತರು ಭಗವಂತನಿಗೆ ಬರೆದಿರುವ ನಾಲ್ಕೈದು ಪತ್ರಗಳು ದೊರೆತಿವೆ. ಹಣದ ಜೊತೆ ತಮ್ಮ ತಮ್ಮ ಬೇಡಿಕೆಯನ್ನೊಳಗೊಂಡ ಪತ್ರವನ್ನು ದೇವರಿಗೆ ಸಮರ್ಪಿಸಿದ್ದಾರೆ.
ಪತ್ರದಲ್ಲಿ ಭಕ್ತರೊಬ್ಬರು ಆಸ್ತಿ ವ್ಯಾಜ್ಯದ ವಿಚಾರವಾಗಿ ಬೇಡಿಕೆ ಇಟ್ಟಿದ್ದು, ಅಕ್ಕ-ತಂಗಿಯರಿಗೆ ಆಸ್ತಿಗದಿರಲಿ. ಕೋರ್ಟ್ ನಲ್ಲಿ ಗಂಡುಮಕ್ಕಳ ಪರವಾಗಿ ತೀರ್ಪು ಬರಲಿ ಎಂದು ಪ್ರಾರ್ಥಿಸಿದ್ದಾರೆ.. ಇನ್ನೊಂದು ಪತ್ರದಲ್ಲಿ ಯುವಕನೊಬ್ಬ ಸಮಾಜದ ಮುಖಂಡನಾಗುವಂತೆ ಮಾಡೆಂದು ಬೇಡಿಕೆ ಇಟ್ಟಿದ್ದಾನೆ. ಇನ್ನೋರ್ವ ಭಕ್ತ ತನಗೆ ಧೈರ್ಯ ನೀಡು, ಇಡೀ ಸಮಾಜದಲ್ಲಿ ಒಳ್ಳೆ ಹೆಸರು ಮಾಡುವಂತೆ ಮಾಡು. ಹಣ ಸಂಪಾದಿಸುತ್ತೇನೆ. ಏರಿಯಾದಲ್ಲಿ ಧೈರ್ಯವಾಗಿ ಮಾತನಾಡುವಂತೆ ಮಾಡು ಎಂದು ಮೊರೆ ಇಟ್ಟಿದ್ದಾನೆ. ಮತ್ತೊಂದು ಪತ್ರದಲ್ಲಿ ತಾಯೊಯೊಬ್ಬರು ಮಗನಿಗೆ ಒಳ್ಳೆಯ ಬುದ್ಧಿ ಕೊಡು. ತನ್ನನ್ನು ಬೈಯ್ಯದಂತೆ ಮಾಡು. ಹಿಂದೆ ಮಾಡಿದ್ದ ತಪ್ಪನ್ನು ತಾನು ಮಾಡಲ್ಲ, ಆರೋಗ್ಯ ಭಾಗ್ಯ ಕೊಡು ಎಂದು ಬೇಡಿಕೊಂಡಿದ್ದಾರೆ.
ರಂಗನಾಥಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ 42,11,305 ರೂಪಾಯಿ ಹಣ ಸಂಗ್ರಹವಾಗಿದ್ದು, ವಿದೇಶಿ ಕರೆನ್ಸಿಗಳೂ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.