ಚುನಾವಣೆಗೆ ಸ್ಪರ್ಧಿಸುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೃತ್ತ ಸರ್ಕಾರಿ ನೌಕರರೊಬ್ಬರು ಇದೀಗ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದು, ಶುಕ್ರವಾರದಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದು ಇವರ 94ನೇ ಬಾರಿಯ ಚುನಾವಣಾ ನಾಮಪತ್ರವಾಗಿದೆ.
ಆಗ್ರಾ ನಗರದ 75 ವರ್ಷದ ಹಸ್ನು ರಾಮ್ ಅವರೇ ಈ ವಿಶಿಷ್ಟ ವ್ಯಕ್ತಿಯಾಗಿದ್ದು, ಇವರು ಸರ್ಕಾರಿ ನೌಕರರಾಗಿದ್ದ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದು ವಿಧಾನಸಭಾ ಟಿಕೆಟ್ ನೀಡುವ ಭರವಸೆ ನೀಡಿ ಉದ್ಯೋಗಕ್ಕೆ ರಾಜೀನಾಮೆ ಕೊಡಿಸಿತ್ತೆಂದು ಹೇಳಲಾಗಿದೆ. ಆ ಬಳಿಕ ಅವರಿಗೆ ಕೊಟ್ಟ ಮಾತಿನಂತೆ ಟಿಕೆಟ್ ನೀಡದೆ ವಂಚಿಸಿದ್ದು, ಇದರಿಂದಾಗಿ ಹಸ್ನು ರಾಮ್ ಅವರ ಕೋಪ ನೆತ್ತಿಗೇರಿದೆ.
ಹೀಗಾಗಿ 1985 ರಲ್ಲಿ ಪ್ರಥಮ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಹಸ್ನು ರಾಮ್, ಮೂರನೇ ಸ್ಥಾನ ಪಡೆದಿದ್ದರಂತೆ. ಆ ಬಳಿಕ ವಿವಿಧ ಹಂತದ ಚುನಾವಣೆಗಳಲ್ಲಿ ಅವರು ಸ್ಪರ್ಧಿಸಿಕೊಂಡು ಬಂದಿದ್ದು, ನಿರಂತರವಾಗಿ ಪರಾಭವಗೊಂಡಿದ್ದಾರೆ. ಆದರೂ ಸಹ ಎದೆಗುಂದದ ಅವರು ಇದೀಗ 94ನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾರೆ.