ಬೆಂಗಳೂರು : ರಾಜ್ಯ ಸರ್ಕಾರವು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡು ದಿನಗಳ ಉದ್ಯೋಗ ಮೇಳದಲ್ಲಿ ದಾಖಲೆಯ 86,088 ಉದ್ಯೋಗಾಂಕ್ಷಿಗಳು ಉದ್ಯೋಗ ಬಯಸಿ ನೋಂದಣಿ ಮಾಡಿಕೊಂಡಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ಕೊನೆಗೊಂಡಿದೆ. ಉದ್ಯೋಗ ಬಯಸಿ ಹೆಸರು ನೋಂದಾಯಿಸಿಕೊಂಡಿದ್ದ ದಾಖಲೆಯ 86,088 ಉದ್ಯೋಗಾಂಕ್ಷಿಗಳು ಮೇಳದಲ್ಲಿ ಕಂಪನಿಗಳಿಗೆ ಸ್ವ- ವಿವರ ಸಲ್ಲಿಸಿದ್ದಾರೆ. ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಒಂದೇ ಸೂರಿನಡಿ ಉದ್ಯೋಗಾವಕಾಶಗಳಿದ್ದವು. ಇಂತಹ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿರುವುದು ದೇಶದಲ್ಲೇ ಮೊದಲು ಎಂದು ರಾಜ್ಯ ಸರ್ಕಾರ ತಿಳಿಸಿದೆ.