1971ರ ಇಂಡೋ – ಪಾಕ್ ಯುದ್ಧದಲ್ಲಿ ಮಡಿದ ತನ್ನ ಒಡನಾಡಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ 80 ವರ್ಷದ ಮಾಜಿ ಯೋಧರೊಬ್ಬರು ತನ್ನ ಹಳೆಯ ಮೊಪೆಡ್ ಮೂಲಕವೇ ಪಂಜಾಬ್ನ ತನ್ನ ತವರು ಪಟ್ಟಣದಿಂದ ಜಮ್ಮು & ಕಾಶ್ಮೀರದ ಅಖ್ನೂರ್ ಸೆಕ್ಟರ್ಗೆ ಬರೋಬ್ಬರಿ 230 ಕಿಲೋಮೀಟರ್ ದೂರ ಪ್ರಯಾಣಿಸಿದ್ದಾರೆ.
ಹೋಶಿಯಾಪುರ ಜಿಲ್ಲೆಯ ಮುಕೇರಿಯನ್ ಬೆಲ್ಟ್ನ ಸೇನಾಧಿಕಾರಿಯಾಗಿದ್ದ ಸುಬೇದಾರ್ ಜೈ ಸಿಂಗ್ 1965 ರಿಂದ 1971ರವರೆಗೆ ನಡೆದ ಇಂಡೋ – ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದರು. ಅಖ್ನೂರ್ ಸೆಕ್ಟರ್ನಲ್ಲಿ ತಮ್ಮ ಒಡನಾಡಿಗಳ ಜೊತೆಯಲ್ಲಿ ಧೈರ್ಯದಿಂದ ಹೋರಾಡಿದ್ದರು.
1965ರ ಯುದ್ಧದ ಸಂದರ್ಭದಲ್ಲಿ ಜೈ ಸಿಂಗ್ ಹಾಜಿಪಿರ್ ಸೆಕ್ಟರ್ನಲ್ಲಿ ಗಿಟಿಯಾನ್ ವಶಪಡಿಸಿಕೊಳ್ಳುವ ವೇಳೆ ಗಾಯಗೊಂಡಿದ್ದರು ಎಂದು ಲೆ. ಕರ್ನಲ್ ಆನಂದ್ ಹೇಳಿದ್ದಾರೆ. ಸುಬೇದಾರ್ ಅಖ್ನೂರ್ ಚಪ್ರಿಯಾಲ್ ಪ್ರದೇಶದಲ್ಲಿ 1971ರ ಯುದ್ಧದಲ್ಲಿ 216 ಫೀಲ್ಡ್ ರೆಜಿಮೆಂಟ್ನೊಂದಿಗೆ ಭಾಗವಹಿಸಿದ್ದರು.
ವಿಜಯ ದಿವಸ್ ಅಂಗವಾಗಿ ಜೈ ಸಿಂಗ್ ತಮ್ಮ ನಿವಾಸದಿಂದ ಬರೋಬ್ಬರಿ 230 ಕಿಲೋಮೀಟರ್ ದೂರವನ್ನು ಮೊಪೆಡ್ನಲ್ಲಿಯೇ ಕ್ರಮಿಸುವ ಮೂಲಕ ಅಖ್ನೂರ್ ಸೆಕ್ಟರ್ಗೆ ಆಗಮಿಸಿದ್ದಾರೆ ಎನ್ನಲಾಗಿದೆ.