ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಹುಚ್ಚು ಹಿಡಿಸಿವೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೇಸ್ಬುಕ್, ಇನ್ ಸ್ಟಾಗ್ರಾಮ್, ಟ್ವಿಟ್ಟರ್ ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಆದ್ರೆ 18 ವರ್ಷದ ಯುವಕನೊಬ್ಬ ಕಳೆದ 6 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕಡೆ ತಲೆಹಾಕಿಯೇ ಇರಲಿಲ್ಲ.
ಇದಕ್ಕಾಗಿ ಅವನಿಗೆ ಭಾರೀ ಬಹುಮಾನವೇ ಸಿಕ್ಕಿದೆ. ವಿದ್ಯಾರ್ಥಿಯ ತಾಯಿ, ಮಗನಿಗೆ 1.35 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಕೊಟ್ಟಿದ್ದಾಳೆ. 6 ವರ್ಷಗಳ ಹಿಂದೆ ಲೋರ್ನಾ ತನ್ನ 12 ವರ್ಷದ ಮಗ ಸಿವರ್ಟ್ ಗೆ ಈ ಆಫರ್ ಕೊಟ್ಟಿದ್ದಳು.
ಆಗ ಚಿಕ್ಕ ಬಾಲಕನಾಗಿದ್ದರಿಂದ ಸಿವರ್ಟ್ ಗೆ 1800 ಡಾಲರ್ ದೊಡ್ಡ ಮೊತ್ತವೆನಿಸಿತ್ತು. ಹಾಗಾಗಿ ತಾಯಿಯ ಷರತ್ತಿಗೆ ಒಪ್ಪಿದ್ದ. ಅದರಂತೆ 6 ವರ್ಷ ಜಾಲತಾಣಗಳಿಂದ ದೂರ ಉಳಿದಿದ್ದಾನೆ.
ಮಗನ 18ನೇ ಹುಟ್ಟುಹಬ್ಬಕ್ಕೆ 1800 ಡಾಲರ್ ಹಣವನ್ನು ಉಡುಗೊರೆಯಾಗಿ ಕೊಟ್ಟಿರೋ ಲೋರ್ನಾ, ಷರತ್ತಿನಂತೆ 6 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ಮಗನಿಗೆ ಈಗ ಇನ್ ಸ್ಟಾಗ್ರಾಮ್, ಸ್ನಾಪ್ ಚಾಟ್ ಮತ್ತು ಟ್ವಿಟ್ಟರ್ ನಲ್ಲಿ ಖಾತೆ ತೆರೆಯಲು ಅನುಮತಿ ಕೊಟ್ಟಿದ್ದಾಳೆ.