
ಒಂದು ತಿಂಗಳ ಒಳಗಾಗಿ ನಾಲ್ಕನೇ ಬಾರಿಗೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಿದ ಖ್ಯಾತಿ ದಕ್ಕಿದೆ. ಇಲ್ಲಿಯವರೆಗೆ ದೇಶದಲ್ಲಿ ನೀಡಲಾದ ಲಸಿಕೆಯು 78 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಆರೋಗ್ಯ ಸಚಿವ ಮುನ್ಸುಖ್ ಮಾಂಡಾವಿಯಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ಜನ್ಮದಿನವಾದ ಇಂದು ಮಧ್ಯಾಹ್ನ 1.30ರ ಒಳಗಾಗಿ ಈಗಾಗಲೇ 1 ಕೋಟಿ ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಅಲ್ಲದೇ ನಾವು ನಾಗಾಲೋಟದಿಂದ ಮುಂದುವರಿಯುತ್ತಿದ್ದೇವೆ. ನಾವು ಇಂದು ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಮೂಲಕ ಪ್ರಧಾನಿ ಮೋದಿಗೆ ಜನ್ಮ ದಿನದ ಉಡುಗೊರೆ ನೀಡುತ್ತೇವೆ ಎಂದು ನಂಬಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್. ಶರ್ಮಾ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿದ್ದು, ಕೋವಿಡ್ 19 ವಿರುದ್ಧ ದೇಶದಲ್ಲಿ ಲಸಿಕೆ ಹಾಕುತ್ತಿರುವವರ ಶ್ರಮವನ್ನು ಕೊಂಡಾಡುತ್ತಾ ನೈಜ ಸಮಯದಲ್ಲಿ ಎಷ್ಟು ಲಸಿಕೆ ಹಾಕಲಾಗಿದೆ ಎಂಬುದನ್ನು ತೋರಿಸಲು ಟಿಕ್ಕರ್ ಸೇರ್ಪಡೆ ಮಾಡಲಾಗಿದೆ. ಇದರ ಪ್ರಕಾರ ನಾವು ಪ್ರತಿ ನಿಮಿಷಕ್ಕೆ 42 ಸಾವಿರ ಹಾಗೂ ಪ್ರತಿ ಸೆಕೆಂಡ್ಗೆ 700 ಲಸಿಕೆಗಳನ್ನು ಹಾಕುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 6, ಆಗಸ್ಟ್ 31 ಹಾಗೂ ಆಗಸ್ಟ್ 27ರಂದು ದೇಶದಲ್ಲಿ ಕೊರೊನಾ ಲಸಿಕೆಯು 1 ಕೋಟಿ ಗಡಿ ದಾಟಿದೆ. ಇಂದು ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಒಂದೇ ದಿನದಲ್ಲಿ 2 ಕೋಟಿ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.