ಯುಕೆಯಲ್ಲಿ ಉದ್ಯೋಗವಿಲ್ಲದ 41 ವರ್ಷದ ವ್ಯಕ್ತಿಯೊಬ್ಬರು, ಜೀವನ ನಿರ್ವಹಣೆಗೆ ತನ್ನ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ಸೋತಿದ್ದಾರೆ.
ಫೈಜ್ ಸಿದ್ದಿಕಿ ಎಂಬುವವರು ಇಂಗ್ಲೆಂಡ್ ನ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಉನ್ನತ ಕಾನೂನು ಸಂಸ್ಥೆಗಳಲ್ಲಿ ಅಭ್ಯಾಸ ಮಾಡಿರುವ ಫೈಜ್, 2011 ರಿಂದ ನಿರುದ್ಯೋಗಿಯಾಗಿದ್ದಾರೆ.
ಅವರು ಲಂಡನ್‌ನ ಹೈಡ್ ಪಾರ್ಕ್ ಬಳಿಯ ತನ್ನ ಪೋಷಕರ ಮಾಲೀಕತ್ವದ £ 1,000,000 ( ರೂ. 10.6 ಕೋಟಿ) ಮೌಲ್ಯದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಫೈಜ್ ನ ವೆಚ್ಚಗಳನ್ನೆಲ್ಲವನ್ನೂ ಇವರ ತಂದೆ-ತಾಯಿ ಭರಿಸುತ್ತಿದ್ದರು.
ಆದರೆ, ಕುಟುಂಬದ ಭಿನ್ನಾಭಿಪ್ರಾಯದ ನಂತರ ಫೈಜ್ ಪೋಷಕರಾದ ಜಾವೇದ್ (71) ಮತ್ತು ರಕ್ಷಾಂದ (69) ಹಣಕಾಸು ನೆರವಿನ ಮೊತ್ತವನ್ನು ಕಡಿಮೆ ಮಾಡಿದ್ದಾರೆ. ಪ್ರಸ್ತುತ ನೀಡುತ್ತಿರುವ ವಾರಕ್ಕೆ 400 ಪೌಂಡ್‌ಗಳಿಗಿಂತ ಹೆಚ್ಚಿನದನ್ನು ನೀಡಲು ಬಯಸುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಫೈಜ್ ಸ್ವತಃ ತನ್ನ ಹೆತ್ತವರ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಪೋಷಕರೇ ತನ್ನನ್ನು ಅವಲಂಬಿತನನ್ನಾಗಿಸಿದ್ದು ಎಂದು ಆರೋಪ ಮಾಡಿದ್ದಾರೆ.
ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಫೈಜ್ ಹಕ್ಕನ್ನು ತಿರಸ್ಕರಿಸಿದೆ. ಯಾವುದೇ ಪೋಷಕರಿಗೆ ತಮ್ಮ ವಯಸ್ಕ ಮಕ್ಕಳನ್ನು ಬೆಂಬಲಿಸಲು ಯಾವುದೇ ಕಾನೂನು ಕರ್ತವ್ಯವಿಲ್ಲ ಎಂದು ಹೇಳಿದೆ.