2 ಅಥವಾ 3 ವರ್ಷದ ಮಗುವಿನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಇತ್ತೀಚಿನ ದಿನಗಳಲ್ಲಿ ಆ ವಯಸ್ಸಿನ ಮಕ್ಕಳು ಮಾಡುವ ಸಣ್ಣ ಸಣ್ಣ ಚುರುಕು ಚಾಕಚಕ್ಯತೆಗಳು, ಕಲಾ ಪ್ರದರ್ಶನ ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರಾಗಿಬಿಡುತ್ತದೆ. ಇಲ್ಲೊಂದು ಪುಟ್ಟ ಹುಡುಗಿ ಇದೇ ರೀತಿಯ ಕಾರಣಕ್ಕೆ ಗಮನ ಸೆಳೆದಿದ್ದು, ದಾಖಲೆಯನ್ನೂ ಬರೆದಿದ್ದಾಳೆ.
ದೆಹಲಿಯ ವಿವೇಕ್ ವಿಹಾರ್ನ ದಿವಿಶಾ ಬನ್ಸಾಲಿಗೆ ಮೂರು ವರ್ಷ ವಯಸ್ಸು. ಆಕೆ ಈಗಾಗಲೇ ಮೂರು-ಲೇಯರ್ಡ್, ಟು-ವೇ ಮತ್ತು ಪ್ರಿಮಿಕ್ಸ್ ಕ್ಯೂಬ್ಗಳನ್ನು ಪರಿಹರಿಸುವ ಮೂಲಕ ಕಿರಿಯ ಕ್ಯೂಬ್ ಸಾಲ್ವರ್ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಹೆಚ್ಚು ಆಶ್ಚರ್ಯಕರ ಮತ್ತು ಮನಸ್ಸಿಗೆ ಮುದ ನೀಡುವ ಸಂಗತಿಯೆಂದರೆ ದಿವಿಶಾ ಈ ಸಾಧನೆಯನ್ನು ಕೇವಲ ಐದು ನಿಮಿಷಗಳಲ್ಲಿ ಪೂರೈಸಿ ಸಾಧಿಸಿದ್ದಾಳೆ. ಇಂಡಿಯನ್ ಕ್ಯೂಬ್ ಅಸೋಸಿಯೇಷನ್ ಪ್ರಕಾರ, ಈ ಹಿಂದೆ ದಾಖಲೆಯನ್ನು ಹೊಂದಿದ್ದ ಮಗು ಮೂರು ಗಂಟೆಗಳನ್ನು ತೆಗೆದುಕೊಂಡಿತ್ತು.
ದಿವಿಶಾ ತಾಯಿ ಆರತಿ ಬನ್ಸಾಲಿಯವರು ತಮ್ಮ ಮಗಳ ಸಾಧನೆ ಹಿಂದಿನ ಕತೆಯನ್ನ ವಿವರಿಸಿದ್ದು, ದಿವಿಶಾ ಯಾವಾಗಲೂ ಕ್ಯೂಬ್ಗಳನ್ನು ಸ್ವತಃ ಪರಿಹರಿಸಲು ಇಷ್ಟಪಡುತ್ತಾಳೆ, ಮುಂಚಿನಿಂದಲೂ ಚುರುಕು ಸ್ವಭಾವ, ಒಂದು ದಿನ ಓದುತ್ತಿರುವಾಗ ದಿವಿಶಾ ಕ್ಯೂಬ್ ಹಿಡಿದು ಪರಿಹರಿಸಲು ಪ್ರಾರಂಭಿಸಿದಳು. ಅವಳ ಆಸಕ್ತಿ ಹೆಚ್ಚಾಯಿತು, ಆದ್ದರಿಂದ ಕ್ಯೂಬ್ಗಳನ್ನು ಪರಿಹರಿಸುವ ತಂತ್ರಗಳನ್ನು ಕಲಿಸಲು ಯೋಚಿಸಿದೆ. ಕೇವಲ 40 ದಿನಗಳಲ್ಲಿ ದಿವಿಶಾಗೆ ಪಾಠ ಕಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.