ಡಿಆರ್ಡಿಓ ಅಭಿವೃದ್ಧಿ ಪಡಿಸಿದ ಕೊರೊನಾ ವಿರೋಧಿ 2 ಡಿಜಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ಘೋಷಣೆ ಡಾ. ರೆಡ್ಡೀಸ್ ಲ್ಯಾಬೋರೇಟರಿ ಮಾಡಿದೆ. ಪ್ರತಿ ಸ್ಯಾಚೆಟ್ನ ಎಂಆರ್ಪಿ 990 ರೂಪಾಯಿ ಇರಲಿದೆ ಎಂದು ಲ್ಯಾಬೋರೇಟರಿ ಹೇಳಿದೆ.
2 ಡಯೋಕ್ಸಿ ಡಿ ಗ್ಲುಕೋಸ್ ಅನ್ನೋದು ಕೋವಿಡ್ 19 ರೋಗಿಗಳಿಗೆ ನೀಡಬಹುದಾದ ಆಂಟಿ ವೈರಲ್ ಔಷಧಿಯಾಗಿದೆ. ರಕ್ಷಣಾ ಸಚಿವಾಲಯ ಮೇ 17ರಂದು ಈ ಔಷಧಿಯ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಡಿಆರ್ಡಿಓ ಅಭಿವೃದ್ಧಿಪಡಿಸಿದ ಈ ಔಷಧಿಯನ್ನು ಹೈದರಾಬಾದ್ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿ ತಯಾರು ಮಾಡುತ್ತಿದೆ. 2 ಡಿಜಿ ಬ್ರ್ಯಾಂಡ್ ಹೆಸರಿನ ಅಡಿಯಲ್ಲಿ ಮಾರಾಟವಾಗಲಿರುವ ಈ ಔಷಧಿಯು 99.5 ಪ್ರತಿಶತ ಶುದ್ಧತೆ ಹೊಂದಿದೆ.
ದೇಶದಲ್ಲಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಡಾ.ರೆಡ್ಡೀಸ್ ಈ ಔಷಧಿಗಳನ್ನ ಸರಬರಾಜು ಮಾಡಲಿದೆ. ಮೊದಲ ಹಂತದಲ್ಲಿ ಕಂಪನಿಯು ಮಹಾನಗರ ಹಾಗೂ 1ನೇ ಶ್ರೇಣಿಯ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಔಷಧಿ ನೀಡಲಿದೆ. ಉಳಿದ ಭಾಗಗಳಿಗೆ ನಂತರದ ದಿನಗಳಲ್ಲಿ ಲಸಿಕೆ ವಿತರಣೆಯಾಗಲಿದೆ ಎಂದು ಕಂಪನಿ ಹೇಳಿದೆ.