ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ತಂದೆ -ತಾಯಿಯನ್ನು ಬಂಧಿಸಿದ್ದಾರೆ.
ಪ್ರತಿನಿತ್ಯವೂ ರಾಮನಾಥ್ ಎಂಬ ಈ ಯುವಕ ಬಾಲಕಿಗೆ ಚುಡಾಯಿಸುತ್ತಿದ್ದು, ಈ ವಿಚಾರವನ್ನು ಆಕೆ ತನ್ನ ಪೋಷಕರಿಗೂ ತಿಳಿಸಿದ್ದಳು ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ಕುಟುಂಬದ ನಡುವೆ ಆಗಾಗ ಮಾತಿನ ಚಕಮಕಿಯೂ ನಡೆದಿತ್ತು ಎಂದು ತಿಳಿದುಬಂದಿದೆ.
ಮಂಗಳವಾರದಂದು ರಾಮನಾಥ್ ಬಾಲಕಿಗೆ ಮತ್ತೆ ಅಶ್ಲೀಲವಾಗಿ ಚುಡಾಯಿಸಿದ ಇದು ಬಾಲಕಿಯನ್ನು ಕೆರಳಿಸಿದೆ. ಮನೆಗೆ ಹಿಂದಿರುಗಿದ ಆಕೆ ತನ್ನ ತಂದೆ – ತಾಯಿಯನ್ನು ಕರೆದುಕೊಂಡು ಬಂದಿದ್ದು, ಆಗ ಕೈಕೈ ಮಿಲಾವಣೆ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದು ಬಾಲಕಿ ಚಾಕುವಿನಿಂದ ರಾಮನಾಥ್ ಎದೆಗೆ ಇರಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ರಾಮನಾಥ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.