ಚೈನೀಸ್ ಖಾದ್ಯಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ ಇದ್ದರೂ ಸಹ ಬಾಯಿಗೆ ರುಚಿ ಮಾತ್ರ ಚೆನ್ನಾಗಿ ನೀಡೋದ್ರಿಂದ ಎಂದಿಗೂ ಫೇಮಸ್ ಆಗಿಯೇ ಇವೆ. ಆದರೆ ಇಲ್ಲೊಂದು ಚೈನೀಸ್ ಖಾದ್ಯಗಳ ಅಂಗಡಿಯಲ್ಲಿ ಅಲ್ಲಿನ ಖಾದ್ಯಗಳಿಗಿಂತ ಹೆಚ್ಚಾಗಿ ಅವುಗಳನ್ನು ತಯಾರಿಸುವ ಬಾಲಕ ಹೆಚ್ಚು ಸುದ್ದಿಯಲ್ಲಿ ಇದ್ದಾನೆ.
ಹರಿಯಾಣದ ಫರೀದಾಬಾದ್ ನಲ್ಲಿ 13 ವರ್ಷದ ಬಾಲಕನೊಬ್ಬ ಫಟಾಫಟ್ ಅಂತಾ ಚೈನೀಸ್ ಖಾದ್ಯಗಳನ್ನು ತಯಾರಿಸುವ ಮೂಲಕ ಗ್ರಾಹಕರ ಹುಬ್ಬೇರುವಂತೆ ಮಾಡಿದ್ದಾನೆ.
ದೀಪೇಶ್ ಎಂಬ ಹೆಸರಿನ ಈ ಪೋರ ಆಡುವ ವಯಸ್ಸಿನಲ್ಲಿ ಬಾಣಸಿಗನಾಗಿದ್ದಾನೆ.
ಈತ ಚೈನೀಸ್ ಖಾದ್ಯಗಳನ್ನು ತಯಾರಿಸುವ ರೀತಿಯೇ ನಿಮಗೆ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ. ಹೊತ್ತಿ ಉರಿಯುವ ಬೆಂಕಿಯ ನಡುವೆಯೂ ಕಿಂಚಿತ್ತೂ ಹೆದರದೇ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಸರ್ವ್ ಮಾಡುತ್ತಾನೆ.
ಫುಡ್ ವ್ಲೋಗರ್ ಒಬ್ಬರು ಶೇರ್ ಮಾಡಿರುವ ವಿಡಿಯೋದಲ್ಲಿ ದಿಪೇಶ್ ಇಂಡೋ ಚೈನೀಸ್ ರೆಸಿಪಿಯಾದ ಚಿಲ್ಲಿ ಪೊಟ್ಯಾಟೋವನ್ನು ತಯಾರಿಸಿದ್ದಾನೆ. ಇದು ದೀಪೇಶ್ ಕುಟುಂಬಕ್ಕೆ ಸೇರಿದ ಬೀದಿ ಬದಿಯ ಅಂಗಡಿಯಾಗಿದೆ. ಇಷ್ಟೆಲ್ಲ ಅಡುಗೆಯನ್ನು ಹೇಗೆ ಕಲಿತೆ ಎಂದು ಕೇಳಿದ್ದಕ್ಕೆ ಬಾಲಕ, ನೋಡಿ ನೋಡಿಯೇ ಕಲಿತೆ ಎಂದು ನಗುತ್ತಾ ಉತ್ತರಿಸಿದ್ದಾನೆ.