alex Certify ರಕ್ಷಣಾ ಸಚಿವಾಲಯದ ಉದ್ಯೋಗಗಳಲ್ಲಿ ಅಗ್ನಿವೀರ್ ಗಳಿಗೆ ಶೇ. 10 ರಷ್ಟು ಮೀಸಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ಷಣಾ ಸಚಿವಾಲಯದ ಉದ್ಯೋಗಗಳಲ್ಲಿ ಅಗ್ನಿವೀರ್ ಗಳಿಗೆ ಶೇ. 10 ರಷ್ಟು ಮೀಸಲು

ನವದೆಹಲಿ: ಸಶಸ್ತ್ರ ಪಡೆಗಳಿಗೆ ಸೈನಿಕರ ನೇಮಕಾತಿಗಾಗಿ ‘ಅಗ್ನಿಪಥ್’ ಯೋಜನೆ ಜಾರಿ ವಿರುದ್ಧ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಯುತ್ತಿರುವುದರ ನಡುವೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ರಕ್ಷಣಾ ಸಚಿವಾಲಯದಲ್ಲಿ ಶೇ. 10 ರಷ್ಟು ಖಾಲಿ ಹುದ್ದೆಗಳನ್ನು ಅಗ್ನಿವೀರರಿಗೆ ಕಾಯ್ದಿರಿಸುವ ಪ್ರಸ್ತಾವನೆ ಅನುಮೋದಿಸಿದ್ದಾರೆ.

ಶೇ. 10 ರಷ್ಟು ಮೀಸಲಾತಿಯನ್ನು ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ನಾಗರಿಕ ಹುದ್ದೆಗಳಲ್ಲಿ ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ(DPSU) ಜಾರಿಗೊಳಿಸಲಾಗುವುದು. ಈ ಮೀಸಲಾತಿಯು ಮಾಜಿ ಸೈನಿಕರಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿರುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಮೂವರು ಸೇವಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಲಾಗಿದೆ. ಈ ನಿಬಂಧನೆಗಳನ್ನು ಕಾರ್ಯಗತಗೊಳಿಸಲು ಸಂಬಂಧಿತ ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು. ಅಗತ್ಯ ವಯೋಮಿತಿ ಸಡಿಲಿಕೆಯನ್ನೂ ಮಾಡಲಾಗುವುದು ಎಂದು ಹೇಳಲಾಗಿದೆ.

ಅದೇ ರೀತಿ, ಗೃಹ ವ್ಯವಹಾರಗಳ ಸಚಿವಾಲಯವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ(CAPF) ಮತ್ತು ಅಸ್ಸಾಂ ರೈಫಲ್ಸ್‌ ನಲ್ಲಿ ಅಗ್ನಿವೀರ್‌ ಗಳಿಗಾಗಿ ಶೇ. 10 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸುವ ನಿರ್ಧಾರ ಪ್ರಕಟಿಸಿದೆ. ಅಸ್ಸಾಂ ರೈಫಲ್ಸ್, CAPF ಗಳಲ್ಲಿ ನೇಮಕಾತಿಗಾಗಿ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು. ಇದಲ್ಲದೆ, ಅಗ್ನಿವೀರ್‌ ಗಳ ಮೊದಲ ಬ್ಯಾಚ್‌ ಗೆ ಈ ಗರಿಷ್ಠ ವಯಸ್ಸಿನ ಸಡಿಲಿಕೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...