ಶಾರ್ಜಾದಿಂದ ಹೈದರಾಬಾದ್‌ಗೆ ಆಗಮಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರ ಒಳುಡುಪಿನಲ್ಲಿ 43.55 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪೇಸ್ಟ್ ರೂಪದಲ್ಲಿದ್ದ 895.2 ಗ್ರಾಂ ಚಿನ್ನವನ್ನು ಈತ ತನ್ನ ಒಳ ಉಡುಪಿನಲ್ಲಿ ಇಟ್ಟಿದ್ದ. ಪ್ಲಾಸ್ಟಿಕ್ ಪೌಚ್‌ಗಳಲ್ಲಿ ಚಿನ್ನದ ಪೇಸ್ಟ್ ಅನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಈತನ ವಿರುದ್ಧ ಕಳ್ಳಸಾಗಾಟದ ಪ್ರಕರಣ ದಾಖಲಿಸಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ದೇಶದೊಳಗೆ ಚಿನ್ನವನ್ನು ಕಳ್ಳಸಾಗಾಟ ಮಾಡುವ ಅನೇಕ ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹಿಡಿಯಲಾಗುತ್ತಿದೆ.
ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ 14 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತಾನು ಧರಿಸಿದ್ದ ಪ್ಯಾಂಟಿನ ನಡುವೆ 302 ಗ್ರಾಂ ಚಿನ್ನವನ್ನು ಈ ಪ್ರಯಾಣಿಕ ಬಚ್ಚಿಟ್ಟಿದ್ದ.
ಮೂರೇ ವರ್ಷದಲ್ಲಿ ಇಮ್ರಾನ್ ಸರ್ಕಾರದಿಂದ 149 ಲಕ್ಷ ಕೋಟಿ ರೂ. ಸಾಲ…! ಅಧೋಗತಿಗೆ ಇಳಿದ ಪಾಕಿಸ್ತಾನ
ಜುಲೈನಲ್ಲಿ, ದುಬೈನಿಂದ ತನ್ನ ಗುದದ್ವಾರದಲ್ಲಿ, 40 ಲಕ್ಷ ರೂ. ಮೌಲ್ಯದ 810 ಗ್ರಾಂ ಚಿನ್ನ ಹೊತ್ತು ತರುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದರು.
ಕಸ್ಟಮ್ಸ್ ನಿಯಮಗಳ ಪ್ರಕಾರ, ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಪುರುಷರು ತಮ್ಮ ಬ್ಯಾಗೇಜ್‌ನಲ್ಲಿ 50,000 ರೂ. ದಾಟದ, 20 ಗ್ರಾಂನಷ್ಟು ಚಿನ್ನವನ್ನು ಮಾತ್ರ ತರಬಹುದಾಗಿದೆ. ಮಹಿಳೆಯರು ಇದರ ದುಪ್ಪಟ್ಟು ಚಿನ್ನವನ್ನು ತರಬಹುದಾಗಿದೆ. ಆಭರಣಗಳ ರೂಪದಲ್ಲಿ ತರುವ ಚಿನ್ನಕ್ಕೆ ಮಾತ್ರ ಈ ಅವಕಾಶ ಅನ್ವಯವಾಗುತ್ತದೆ.
ಇತರ ಪ್ರಯಾಣಿಕರು ವಿದೇಶದಿಂದ ಚಿನ್ನ ತರುವ ವೇಳೆ ಸರ್ಕಾರ ವಿಧಿಸಿದ ಸುಂಕ ಪಾವತಿ ಮಾಡಬೇಕಾಗುತ್ತದೆ.