ನ್ಯೂಯಾರ್ಕ್: ಕಾರ್ಟೂನ್ ನೆಟ್ವರ್ಕ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. 90ರ ದಶಕದಿಂದಲೂ ಆಬಾಲವೃದ್ಧರ ಮನ ಸೂರೆಗೊಳಿಸಿದ್ದ ಕಾರ್ಟೂನ್ ನೆಟ್ವರ್ಕ್ ಇನ್ನುಮುಂದೆ ಟಿ.ವಿ.ಯಲ್ಲಿ ಪ್ರತ್ಯೇಕವಾಗಿ ಪ್ರಸಾರ ಆಗುವುದಿಲ್ಲ. ಇದಕ್ಕೆ ಕಾರಣ ಈ ಚಾನೆಲ್ ಅನ್ನು ವಾರ್ನರ್ ಬ್ರದರ್ಸ್ ಅನಿಮೇಷನ್ನೊಂದಿಗೆ ವಿಲೀನಗೊಳಿಸಲಾಗುತ್ತಿದೆ.
ಈ ಸುದ್ದಿ ತಿಳಿಯುತ್ತಲೇ ಟ್ವಿಟರ್ನಲ್ಲಿ ‘#RIPCartoonNetwork’ ಟ್ರೆಂಡ್ ಶುರುವಾಗಿದೆ. ಕಾರ್ಟೂನ್ ನೆಟ್ವರ್ಕ್ನ ಅಭಿಮಾನಿಗಳು ದುಃಖದಿಂದ ಇದಕ್ಕೆ ವಿದಾಯ ಹೇಳುತ್ತಿದ್ದಾರೆ. ಭಾವನಾತ್ಮಕ ಟಿಪ್ಪಣಿಗಳ ಸುರಿಮಳೆ ಟ್ವಿಟರ್ನಲ್ಲಿ ಶುರುವಾಗಿದೆ.
ಇದನ್ನು ಗಮನಿಸಿರುವ ಕಾರ್ಟೂನ್ ನೆಟ್ವರ್ಕ್ ತಂಡವು, ತನ್ನ ಅಭಿಮಾನಿಗಳಿಗೆ ಸಾಂತ್ವನ ಹೇಳಿದೆ. “ಈ ರೀತಿ ನಿರಾಸೆ ಪಡಬೇಕಾದ ಅಗತ್ಯವಿಲ್ಲ. ನಮ್ಮ ನೆಟ್ವರ್ಕ್ಗೆ ಈಗ 30 ವರ್ಷದ ಹರೆಯ. ಆದ್ದರಿಂದ ಸ್ವಲ್ಪ ಬದಲಾವಣೆ ಮಾಡಲಾಗಿದೆಯಷ್ಟೇ. ನಮ್ಮ ಮೂಲ ತತ್ವವನ್ನು ನಾವು ಬಿಟ್ಟುಕೊಡುವುದಿಲ್ಲ. ವಾರ್ನರ್ ಬ್ರದರ್ಸ್ ಅನಿಮೇಷನ್ನೊಂದಿಗೆ ವಿಲೀನವಾದ ಮಾತ್ರಕ್ಕೆ ಏನೂ ಹೆಚ್ಚಿಗೆ ಬದಲಾವಣೆ ಆಗುತ್ತಿಲ್ಲ. ಯಾರೂ ಬೇಸರಿಸುವ ಅಗತ್ಯವಿಲ್ಲ” ಎಂದು ಹೇಳಿದೆ.
ಕಾರ್ಟೂನ್ ನೆಟ್ವರ್ಕ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಅಭಿಮಾನಿಗಳಿಗೆ ಆಶ್ವಾಸನೆಯನ್ನೂ ನೀಡಲಾಗಿದೆ. “ರಿಪ್ ಎಂದು ಹೇಳಬೇಡಿ. ನಾವು ಸತ್ತಿಲ್ಲ. ನಾವು ಎಲ್ಲಿಯೂ ಹೋಗುತ್ತಿಲ್ಲ. ನಿಮ್ಮ ಪ್ರೀತಿಯನ್ನು ನಾವು ಹಾಗೆಯೇ ಉಳಿಸಿಕೊಳ್ಳುತ್ತೇವೆ, ಮತ್ತಷ್ಟು ನಾವೀನ್ಯತೆಯೊಂದಿಗೆ ನಮ್ಮ ಕಾರ್ಟೂನ್ಗಳು ಬರಲಿವೆ. ಅದಕ್ಕಾಗಿ ನೀವೆಲ್ಲಾ ನಿರೀಕ್ಷಿಸಿ” ಎಂದು ಭರವಸೆ ನೀಡಲಾಗಿದೆ.