ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ವಿಚಾರಣೆ ಆರಂಭವಾಗಿದ್ದು, ಕಾನೂನು ಪ್ರಕಾರ ವಿಚಾರಣೆ ನಡೆಸೋಣ. ಎಲ್ಲಾ ಭಾವನೆಗಳನ್ನು ಹೊರಗಿಡಿ. ಸಂವಿಧಾನವೇ ಭಗವದ್ಗೀತೆ. ಹೀಗಾಗಿ ಸಂವಿಧಾನದ ಪ್ರಕಾರ ವಿಚಾರಣೆ ನಡೆಸೋಣ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಮೂರು ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ಆರಂಭವಾಗಿದೆ. ಈ ವೇಳೆ ವಾದ ಮಂಡಿಸಿದ ಮೊಹಮ್ಮದ್ ತಾಹಿರ್, ಹಲವು ಕಾಲೇಜುಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಲಿ. ಅಲ್ಲಿಯವರೆಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದು, ಸರ್ಕಾರದ ಪರ ವಕೀಲ ಎ.ಜಿ. ಪ್ರಭುಲಿಂಗ ಈಗಾಗಲೇ ಸರ್ಕಾರ ಜಾರಿಗೊಳಿಸಿರುವ ಸಮವಸ್ತ್ರ ಕಡ್ಡಾಯ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ʼಕಚ್ಚಾ ಬಾದಾಮ್ʼ ಹಾಡಿಗೆ ಫ್ರೆಂಚ್ ಯುವಕನಿಂದ ಬೊಂಬಾಟ್ ಸ್ಟೆಪ್ಸ್
ಈ ವೇಳೆ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅಗತ್ಯ ಆಚರಣೆ ಎಂದು ಕುರಾನ್ ನಲ್ಲಿ ಉಲ್ಲೇಖವಿದೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಹಕ್ಕು ಉಲ್ಲಂಘಿಸಿದೆ. ಸಂವಿಧಾನದ 19(1)A ಹಾಗೂ 21ನೇ ವಿಧಿ ಅಡಿಯಲ್ಲಿ ಇಚ್ಛೆಯ ಬಟ್ಟೆ ಧರಿಸುವ ಹಕ್ಕಿದೆ ಎಂದು ವಾದ ಮಂಡಿಸಿದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಹೈಕೋರ್ಟ್ ಲೈಬ್ರರಿಯಿಂದ ಕುರಾನ್ ಪ್ರತಿ ತರಿಸಲು ಸೂಚಿಸಿದ್ದು, ಶಾಂತಿ ಪ್ರಕಾಶನದ ಕುರಾನ್ ಅಧಿಕೃತವೆಂದು ಪರಿಗಣಿಸಬಹುದೇ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಅರ್ಜಿದಾರರು ಕೇರಳ ಹೈಕೋರ್ಟ್ ತೀರ್ಪು ಉಲ್ಲೇಖಿಸಿದ್ದು, ಎದೆಯ ಮೇಲೆ, ಶಿರದ ಮೇಲೆ ವಸ್ತ್ರ ಧರಿಸಬೇಕು. ಖಾಸಗಿ ಅಂಗಗಳ ಮೇಲೆ ವಸ್ತ್ರ ಧರಿಸಬೇಕು, ಪತಿ, ಮಕ್ಕಳು, ಸಖಿಯರು, ಆಪ್ತ ವರ್ಗದವರ ಮುಂದೆ ಮಾತ್ರ ಹಿಜಾಬ್ ಗೆ ವಿನಾಯಿತಿಯಿರುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಹೈಕೋರ್ಟ್, ಇಸ್ಲಾಂ ನ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೇ ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ವಕೀಲ ದೇವದತ್ ಕಾಮತ್, ಧಾರ್ಮಿಕ ಆಚರಣೆ, ಸರ್ಕಾರದ ನಿಯಮದ ನಡುವೆ ಗೊಂದಲವಿದ್ದಾಗ ಕೋರ್ಟ್ ಇದನ್ನು ತೀರ್ಮಾನಿಸಬೇಕು ಎಂದು ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಲಕ್ಷ್ಮೀಂದ್ರ ತೀರ್ಥ ಸ್ವಾಮಿಯರ್ ವರ್ಸಸ್ ರಾಜ್ಯ, ಅಮೆರಿಕಾ ಸಂವಿಧಾನ, ಹಳೆಯ ತೀರ್ಪನ್ನು ಉಲ್ಲೇಖಿಸಿದರು.