alex Certify ಹಿಜಾಬ್ ವಿವಾದ; ಸುದೀರ್ಘ ವಾದ ಮಂಡನೆ ಮಾಡಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ವಿವಾದ; ಸುದೀರ್ಘ ವಾದ ಮಂಡನೆ ಮಾಡಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್

ಬೆಂಗಳೂರು: ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಸುದೀರ್ಘ ವಾದ ಮಂಡಿಸಿದ್ದಾರೆ.

ಇಂದೂ ಕೂಡ ಬೇರೆ ಬೇರೆ ಕೋರ್ಟ್ ಗಳ ತೀರ್ಪನ್ನು ಉಲ್ಲೇಖಿಸಿ ವಾದ ಮಂಡನೆ ಮಾಡಿದ ವಕೀಲ ದೇವದತ್ ಕಾಮತ್, ಬೊಹ್ರಾ ಸಮುದಾಯದ ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ ಕುರಿತು ಪ್ರಸ್ತಾಪಿಸಿದರು. ಸಮುದಾಯದ ಮುಖ್ಯಸ್ಥ ಬೇರೆ ವ್ಯಕ್ತಿಗಳನ್ನು ಹೊರಗಿಡಲು ಅವಕಾಶವಿತ್ತು. ಬಾಂಬೆ ಸರ್ಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ರಿಟ್ ಅರ್ಜಿ ಸಲ್ಲಿಕೆಯಾಗಿದ್ದವು. ಹೈಕೋರ್ಟ್ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ ಸಂವಿಧಾನದ ನಿಯಮ 25(1)ರ ಉಲ್ಲಂಘನೆಯಲ್ಲ ಎಂದು ಹೇಳಿತ್ತು. ಹಾಗೆಯೇ ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ ಸಂವಿಧಾನದ 25(1)ರ ಅಡಿ ನಿಯಮದ ಪ್ರಕಾರವೂ ನಿರ್ಬಂಧ ಹೇರುವಂತಿಲ್ಲ ಎಂದಿದ್ದಾರೆ.

ಸತಿ ಪದ್ಧತಿ, ದೇವದಾಸಿ ಪದ್ಧತಿ, ನರಬಲಿಯಂತಹ ಸಂಪ್ರದಾಯಗಳನ್ನು ನಿರ್ಬಂಧಿಸಬಹುದು. ಆದರೆ ಧರ್ಮದಲ್ಲಿ ಕಡ್ಡಾಯ ಆಚರಣೆಗಳನ್ನು ನಿರ್ಬಂಧಿಸಲಾಗದು. ಕೆಲ ವಕೀಲರು ಹಣೆಯಲ್ಲಿ ನಾಮ ಇಡುತ್ತಾರೆ, ಇದನ್ನು ಧಾರ್ಮಿಕ ಆಚರಣೆ ಎಂಬುದಕ್ಕಿಂತ ವೈಯಕ್ತಿಕ ವಿಶ್ವಾಸ ಎನ್ನಬಹುದು. ನಾನು ಶಾಲೆಗೆ ಹೋಗುವಾಗ ರುದ್ರಾಕ್ಷಿಯನ್ನು ಧರಿಸುತ್ತಿದ್ದೆ. ಅದು ನನ್ನ ಧಾರ್ಮಿಕ ಗುರುತಿನ ಪ್ರದರ್ಶನವಾಗಿರಲಿಲ್ಲ ಬದಲಾಗಿ ಅದು ನನ್ನ ನಂಬಿಕೆ ವಿಚಾರವಾಗಿತ್ತು, ನನಗೆ ವಿಶ್ವಾಸ ನೀಡುವ ಅಂಶವಾಗಿತ್ತು. ಕೆಲ ಸಂಪ್ರದಾಯಗಳನ್ನು ವೇದ, ಉಪನಿಷತ್ ಗಳು ನಿಗದಿಪಡಿಸಿವೆ. ಅಂತಹ ಸಂಪ್ರದಾಯಗಳನ್ನು ಕೋರ್ಟ್ ರಕ್ಷಿಸಬೇಕು. ಸಂವಿಧಾನ ರಚನಾಕಾರರು ಆತ್ಮಸಾಕ್ಷಿ ಸ್ವಾತಂತ್ರ್ಯವನ್ನೂ ಗುರುತಿಸಿದ್ದಾರೆ. ಶಿಕ್ಷಣದ ಕಾಯ್ದೆ ಆಧರಿಸಿ ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಲಾಗದು ಎಂದು ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.

ರಸ್ತಾಫಾರಿಯನ್ ಸಂಪ್ರದಾಯದಲ್ಲಿ ಕೂದಲು ಗಂಟು ಮಾಡುವ ಅಭ್ಯಾಸವಿದೆ. ಹಿಜಾಬ್ ಧರಿಸುವ ಸಂಪ್ರದಾಯವಿದ್ದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕು. ಬದಲಿಗೆ ಹಿಜಾಬ್ ಧರಿಸುವುದನ್ನೇ ದಂಡಿಸಬಾರದು. ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಭಾರತದ ವಿದ್ಯಾರ್ಥಿನಿಯೊಬ್ಬರು ಮೂಗುತಿ ಧರಿಸಿ ಶಾಲೆಗೆ ತೆರಳಿದ್ದರು. ಶಾಲೆಯ ಆಡಳಿತ ಮಂಡಳಿ ಇದನ್ನು ಅಡ್ಡಿಪಡಿಸಿತ್ತು. ಇದಕ್ಕೆ ಸಮ್ಮತಿ ನೀಡಿದರೆ ಮುಂದೆ ಒಬ್ಬೊಬ್ಬ ವಿದ್ಯಾರ್ಥಿಗಳು ಒಂದೊಂದು ರೀತಿಯಲ್ಲಿ ಬರುತ್ತಾರೆ, ಭಯಾನಕ ಮೆರವಣಿಗೆಯಾಗುತ್ತದೆ ಎಂದು ಶಾಲೆ ಮೂಗಿನ ನತ್ತು ಧರಿಸಲು ಅವಕಾಶ ನೀಡಿರಲಿಲ್ಲ. ಶಾಲೆ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಳು. 200 ಪುಟಗಳ ತೀರ್ಪನ್ನು ಕೋರ್ಟ್ ನೀಡಿತ್ತು. ಮೂಗಿನ ನತ್ತು 5 ಸಾವಿರ ವರ್ಷಗಳ ಸಂಪ್ರದಾಯ. ಧರ್ಮದ ಕಡ್ಡಾಯ ಆಚರಣೆಯಲ್ಲದಿರಬಹುದು. ಆದರೆ ದಕ್ಷಿಣ ಭಾರತದ ತಮಿಳು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕೋರ್ಟ್ ತಿಳಿಸಿತ್ತು. ಇದಕ್ಕೆ ಮೂಗಿನ ನತ್ತು ಸಮವಸ್ತ್ರದ ಭಾಗವಲ್ಲ, ಶಾಲೆಯಲ್ಲಿ ಮೂಗಿನ ನತ್ತಿಗೆ ಅವಕಾಶವಿಲ್ಲ, ಶಾಲೆಯ ಹೊರಗೆ ಮೂಗು ಬಟ್ಟು ಧರಿಸಬಹುದು. ಶಾಲೆಯ ಒಳಗೆ ಬರುವಾಗ ಮೂಗಿನ ಬಟ್ಟು ತೆಗೆದು ಬರಬೇಕು ಎಂದು ಶಾಲಾ ಆಡಳಿತ ಮಂಡಳಿ ವಾದಿಸಿತ್ತು. ಅದೇ ರೀತಿ ಇಲ್ಲಿ ಹಿಜಾಬ್ ವಿಚಾರದಲ್ಲಿಯೂ ಇಂತದ್ದೇ ವಾದ ಕೇಳಿಬರುತ್ತಿದೆ. ಶಾಲೆಯ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಲ್ಲಿನ ಕೋರ್ಟ್ ಸಿಜೆ, ಮೂಗುಬಟ್ಟು ಆಕೆಯ ಪಾಲಿನ ನಂಬಿಕೆಯ ಆಚರಣೆಯಾಗಿರಬಹುದು. ಆ ಆಚರಣೆ ಧರ್ಮದಲ್ಲಿ ಕಡ್ಡಾಯ ಆಚರಣೆ ಆಗದಿರಬಹುದು. ಎಷ್ಟರಮಟ್ಟಿಗೆ ಆ ಆಚರಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಈ ಅಂಶವನ್ನು ಪರಿಗಣಿಸಬೇಕು ಎಂದು ಕೋರ್ಟ್ ಹೇಳಿತ್ತು ಎಂದಿದ್ದಾರೆ.

ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಿಗೂ ಸಮಭಾವವಿದೆ. ಸರ್ವಧರ್ಮ ಸಮಭಾವ ಎಂಬ ವೇದಗಳ ಉಲ್ಲೇಖವನ್ನು ನಾವು ಪಾಲಿಸುತ್ತೇವೆ. ಒಂದು ಧರ್ಮದವರು ಮತ್ತೊಂದು ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಧಾರ್ಮಿಕ ವೈವಿದ್ಯತೆಯನ್ನು ನಮ್ಮ ದೇಶ ಗುರುತಿಸಿದೆ. ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುತ್ತಾರೆ. ಜತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಇದು ಅಭಿವ್ಯಕ್ತಿ ಸ್ವಾತಂತ್ರದ ಒಂದು ಭಾಗ ಎಂದು ಪರಿಗಣಿಸಬೇಕು. ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯೊಳಗೆ ಬಿಡದಿರುವುದು ಸರಿಯಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ನಿಬಂಧನೆಗಳಿಲ್ಲ ಎನ್ನುವ ದೇವದತ್ ಕಾಮತ್ ವಾದಕ್ಕೆ ಧಾರ್ಮಿಕ ಸ್ವಾತಂತ್ರ್ಯ (25)1 ಶುರುವಾಗುವುದೇ ನಿಬಂಧನೆಗಳಿಂದ ಎಂದು ಸಿಜೆ ತಿಳಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹೆಚ್ಚುವರಿಯಾಗಿ ಹಿಜಾಬ್ ಧರಿಸಿ ಹೋಗಲು ಅನುಮತಿ ನೀಡಬೇಕು ಎಂದು ದೇವದತ್ ಕಾಮತ್ ತಮ್ಮ ವಾದವನ್ನು ಮುಗಿಸಿದ್ದಾರೆ.

ವಾದ ಮಂಡನೆಗೆ ಹಲವು ವಕೀಲರಿಂದ ಹಕ್ಕು ಮಂಡನೆಯಾಗಿದ್ದು, ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಯುವತಿ ಎರಡನೇ ಅರ್ಜಿ ಸಲ್ಲಿಸಿದ್ದು, ಒಂದು ಅರ್ಜಿಯ ಪರ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸುತ್ತಿದ್ದರೆ, ಎರಡನೇ ಯುವತಿಯ ಎರಡನೇ ಅರ್ಜಿ ಪರ ರವಿವರ್ಮಕುಮಾರ್ ವಾದ ಮಂಡಿಸುತ್ತಿದ್ದಾರೆ.

ಒಟ್ಟಾರೆ ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಾದ-ಪ್ರತಿವಾದಗಳು ಇನ್ನಷ್ಟು ಮುಂದುವರೆಯಲಿದ್ದು, ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ತೀರ್ಪು ಹೊರಬೀಳಲು ಇನ್ನಷ್ಟು ಸಮಯಾವಕಾಶವಾಗುವ ಸಾಧ್ಯತೆ ದಟ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...