alex Certify ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ 250 ಕೋಟಿ ರೂ. ಮಂಜೂರು: ಸಿಎಂ ಭರವಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ 250 ಕೋಟಿ ರೂ. ಮಂಜೂರು: ಸಿಎಂ ಭರವಸೆ

ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿಗಳ ಸುಧಾರಣೆ ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಒಟ್ಟು 250 ಕೋಟಿ ರೂ. ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯ ಸರ್ಕಾರದ ಎಲ್ಲ ವಿದ್ಯಾರ್ಥಿನಿಲಯಗಳ ಸಾಮರ್ಥ್ಯವನ್ನು ಶೇ. 25 ರಷ್ಟು ಹೆಚ್ಚಿಸಲು ಅನುದಾನವನ್ನು ನೀಡಲಾಗಿದೆ. ರಾಜ್ಯದ ಒಟ್ಟು 2439 ಹಾಸ್ಟೆಲ್‍ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ವಿದ್ಯಾರ್ಥಿ ವೇತನದಲ್ಲಿ ತಲಾ 150 ರೂ.ಗಳನ್ನು ಹೆಚ್ಚಿಸಲಾಗಿದೆ. 195 ವಿದ್ಯಾರ್ಥಿನಿಲಯ ಕಟ್ಟಡಗಳು ನಿರ್ಮಾಣದ ವಿವಿಧ ಹಂತದಲ್ಲಿವೆ ಎಂದರು.

ಕನಕದಾಸರ ಹೆಸರಿನಲ್ಲಿ 50 ಹೊಸ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ 5 ಶೈಕ್ಷಣಿಕ ಕೇಂದ್ರಗಳಲ್ಲಿ 1000 ಮಕ್ಕಳಿಗೆ ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯನ್ನು 5000 ಮಕ್ಕಳ ಸಾಮರ್ಥ್ಯಕ್ಕೇರಿಸುವ ಗುರಿ ಇದ್ದು, ಹಣವನ್ನು ಒದಗಿಸಲಾಗಿದೆ. ದೇವರಾಜ ಅರಸು ಅವರ ಹೆಸರಿನಲ್ಲಿ ಪಿಹೆಚ್‍ಡಿ ಮಾಡುವ ವಿದ್ಯಾರ್ಥಿಗಳಿಗೆ ಒಟ್ಟು 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ನೀಡಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 10 ಕೋಟಿ ರೂ. ಅನುದಾನ ಹೆಚ್ಚಿಗೆ ನೀಡಲಾಗಿದೆ ಎಂದು ತಿಳಿಸಿದರು.

ನಾರಾಯಣ ಗುರು ಅವರ ಹೆಸರಿನಲ್ಲಿ ತಲಾ 30 ಕೋಟಿ ರೂ. ವೆಚ್ಚದಲ್ಲಿ 4 ಶಾಲೆಗಳನ್ನು ಪ್ರಾರಂಭಿಸಲಾಗುವುದು. ಹಿಂದುಳಿದ ವರ್ಗದ ವಿವಿಧ ನಿಗಮ ಮಂಡಳಿಗೆ ಸುಮಾರು 800 ಕೋಟಿ ರೂ.ಗಳ ಅನುದಾನವನ್ನು ಅಧಿಕವಾಗಿ ನೀಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಯೊಂದು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಯುವಕರ ಸಂಘ ಯೋಜನೆಯಡಿ 10 ಲಕ್ಷ ರೂ. ಅನುದಾನ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ತೀಶಕ್ತಿ ಸಂಘಗಳಿಗೆ ಆರ್ಥಿಕ ಸೌಲಭ್ಯ, ಬ್ಯಾಂಕ್ ಜೋಡಣೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ 5 ಲಕ್ಷ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಠಮಾನ್ಯಗಳಿಗೆ 129 ಕೋಟಿ ರೂ.ಗಳನ್ನು ನೀಡಲಾಗಿದೆ. ದೇವರಾಜ ಅರಸು ಅವರ ವಿಚಾರಗಳನ್ನು, ಕನಸುಗಳನ್ನು ನನಸು ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ವಿವರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...