ಎರಡು ವರ್ಷಗಳ ಹಿಂದೆ ಮೃತಪಟ್ಟ ತನ್ನ ಪತಿ ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ ಮಹಿಳೆಯೊಬ್ಬರು ಅದರೊಂದಿಗೆ ನಾಲ್ಕು ದಿನಗಳ ಕಾಲ ವಾಸವಿದ್ದ ವಿಲಕ್ಷಣ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ – ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಕುಲಹಳ್ಳಿ ಗ್ರಾಮದ ಶಾರದಾ ಕಂಬಾರ ಎಂಬಾಕೆಯ ಪತಿ ಮೌನೇಶ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆದರೆ ತನ್ನ ಪತಿ ಮರಳಿ ಬರುತ್ತಾನೆ ಎಂಬ ಅಚಲ ವಿಶ್ವಾಸದಲ್ಲಿದ್ದ ಈ ಮಹಿಳೆಯ ಮನೆಗೆ ನಾಲ್ಕು ದಿನಗಳ ಹಿಂದೆ ಕೆರೆ ಹಾವೊಂದು ಬಂದಿದೆ. ಇದು ತನ್ನ ಪತಿಯೇ ಎಂದು ಭಾವಿಸಿದ ಆಕೆ ಅದರೊಂದಿಗೆ ವಾಸ ಮಾಡಲು ಆರಂಭಿಸಿದ್ದಾಳೆ.
ಮೂರ್ನಾಲ್ಕು ದಿನಗಳ ಬಳಿಕ ಗ್ರಾಮಸ್ಥರ ಗಮನಕ್ಕೆ ಈ ವಿಷಯ ಬಂದಿದ್ದು, ಹಾವನ್ನು ಹೊರ ತೆಗೆದುಕೊಂಡು ಹೋಗಲು ಯತ್ನಿಸಿದರೆ ಶಾರದಾ ಅವರನ್ನು ತಡೆದು ಇದು ನನ್ನ ಪತಿ ಇಲ್ಲಿಯೇ ಇರಲಿ ಎಂದಿದ್ದಾರೆ. ಕೊನೆಗೂ ಮಹಿಳೆಯ ಮನವೊಲಿಸಿದ ಗ್ರಾಮಸ್ಥರು ಹಾವನ್ನು ಚಾಪೆಯೊಂದರಲ್ಲಿ ಸುತ್ತಿಕೊಂಡು ಹೋಗಿ ಊರ ಹೊರವಲಯದಲ್ಲಿ ಬಿಟ್ಟಿದ್ದಾರೆ.