ದೈನಂದಿನ ಬಳಕೆ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ಮಧ್ಯೆ ಹಾಲು – ಮೊಸರು ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರ ಜೊತೆಗೆ ತುಪ್ಪದ ದರವೂ ಸದ್ದಿಲ್ಲದೆ ಏರಿಕೆಯಾಗಿರುವುದು ಈಗ ತಿಳಿದು ಬಂದಿದೆ.
ಕಳೆದ ಎರಡು ತಿಂಗಳ ಅಂತರದಲ್ಲಿ ತುಪ್ಪದ ಬೆಲೆಯನ್ನು ಒಟ್ಟು ನಾಲ್ಕು ಬಾರಿ ಏರಿಕೆ ಮಾಡಲಾಗಿದ್ದು, ಇದೀಗ ಕೆಜಿ ತುಪ್ಪಕ್ಕೆ ಮತ್ತೆ ಐವತ್ತು ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಕೆಎಂಎಫ್ ನ ಇತರ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಗಲಿದೆ.
ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಇರುವ ಕಾರಣ ಯಾವುದೇ ದರ ಏರಿಕೆ ಮಾಡದಿರಲು ತೀರ್ಮಾನಿಸಲಾಗಿತ್ತಾದರೂ ಅಂತಿಮವಾಗಿ ಅನ್ಯ ಮಾರ್ಗ ಕಾಣದೆ ಬೆಲೆ ಹೆಚ್ಚಳ ಮಾಡಲಾಗಿದೆ. ಆದರೆ ಜನಸಾಮಾನ್ಯರ ಪಾಲಿಗೆ ಇದು ಮತ್ತಷ್ಟು ಹೊರೆಯಾಗಿರುವುದು ನಿಶ್ಚಿತ.