ಇಸ್ತಾನ್‌ಬುಲ್: ಇಸ್ತಾನ್‌ಬುಲ್‌ನಿಂದ ಜಕಾರ್ತಕ್ಕೆ ಪ್ರಯಾಣಿಸುತ್ತಿದ್ದ ಟರ್ಕಿಷ್ ಏರ್‌ಲೈನ್ಸ್ ವಿಮಾನವು ಮಧ್ಯೆಯೇ ತನ್ನ ಮಾರ್ಗವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇಷ್ಟಾಗಿದ್ದರೆ ಇದು ಸುದ್ದಿಯಾಗುತ್ತಲೇ ಇರಲಿಲ್ಲ. ಹೀಗೆ ಮಾರ್ಗವನ್ನು ಬದಲಾಯಿಸಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದ ವಿಚಿತ್ರ ಕಾರಣದಿಂದಾಗಿ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ.
ಇಸ್ತಾನ್‌ಬುಲ್‌ನಿಂದ ಜಕಾರ್ತದ ಬದಲು ವಿಮಾನವು ಮೆಡಾನ್‌ಗೆ ಹೋಗಿದ್ದಕ್ಕೆ ಕಾರಣವೇನೆಂದರೆ, ಪ್ರಯಾಣಿಕರೊಬ್ಬರು ಕ್ಯಾಬಿನ್ ಅಟೆಂಡೆಂಟ್‌ನ ಬೆರಳನ್ನು ಕಚ್ಚಿದ್ದು ! ಪ್ರಯಾಣಿಕನ ಈ ವರ್ತನೆಯಿಂದ ವಿಮಾನದಲ್ಲಿ ಕೆಲ ಸಮಯ ಅಲ್ಲೋಲಕಲ್ಲೋಲ ಉಂಟಾಗಿರುವುದಾಗಿ ವರದಿಯಾಗಿದೆ.
ಆಗಿದ್ದೇನೆಂದರೆ, ಇಂಡೋನೇಷ್ಯಾ ಪ್ರಜೆ ಮುಹಮ್ಮದ್ ಜಾನ್ ಜೈಜ್ ಬೌಡೆವಿಜ್ ಎಂಬ ಪ್ರಯಾಣಿಕ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನಿಗೆ ಹೀಗೆ ಮಾಡದಂತೆ ಕ್ಯಾಬಿನ್ ಅಟೆಂಡೆಂಟ್ ಬುದ್ಧಿ ಹೇಳಲು ಹೋಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಪ್ರಯಾಣಿಕ ಅವರ ಕೈಬೆರಳನ್ನು ಕಚ್ಚಿದ್ದಾನೆ. ಆಗ ಕ್ಯಾಬಿನ್ ಅಟೆಂಡೆಂಟ್ ನೋವಿನಿಂದ ಆ ಪ್ರಯಾಣಿಕನಿಗೆ ಬಾರಿಸಿದ್ದಾನೆ. ಹೀಗೆ ಇಬ್ಬರ ನಡುವೆ ಗುದ್ದಾಟ ಶುರುವಾಗಿ ವಿಮಾನದ ಪಥ ಬದಲಿಸಬೇಕಾಗಿ ಬಂತು.
ಪ್ರಯಾಣಿಕರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇಂಡೋನೇಷ್ಯಾ ಪ್ರಜೆ ಮುಹಮ್ಮದ್ ಜಾನ್ ಜೈಜ್ ಬೌಡೆವಿಜ್ ಟರ್ಕಿಗೆ ವೈಯಕ್ತಿಕ ಪ್ರವಾಸದ ನಂತರ ಜಕಾರ್ತಾಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದ್ದು, ಪರಿಸ್ಥಿತಿ ಶಮನದ ನಂತರ ವಿಮಾನವನ್ನು ಪುನಃ ಜಕಾರ್ತಕ್ಕೆ ಬಿಡಲಾಗಿದೆ ಎಂದಿದ್ದಾರೆ ಪೊಲೀಸರು. ಪ್ರಯಾಣಿಕ ವಿಪರೀತ ಕುಡಿದು ವಿಮಾನ ಏರಿದ್ದ. ಆದ್ದರಿಂದ ಹೀಗೆ ಮಾಡಿದ್ದಾನೆ ಎಂದು ವಿಮಾನದ ಅಧಿಕಾರಿಗಳು ಹೇಳಿದ್ದಾರೆ.