
ಶ್ರೀಕೃಷ್ಣ ಕೊಳಲು ನುಡಿಸುತ್ತಿದ್ರೆ ನೂರಾರು ಗೋವುಗಳು ಆತನ ಸುತ್ತ ನಿಂತು ಸುಮಧುರ ಸಂಗೀತವನ್ನು ಆಲಿಸುತ್ತಿದ್ದವಂತೆ. ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಡಿಆರ್‌ಐ) ನಡೆಸಿರುವ ಸಂಶೋಧನೆಯ ಪ್ರಕಾರ ಹಸುಗಳು ಸಂಗೀತವನ್ನು ಆನಂದಿಸುತ್ತವೆ.
ಅಷ್ಟೇ ಅಲ್ಲ ಸಂಗೀತ ಕೇಳುತ್ತಿದ್ದರೆ ಹೆಚ್ಹೆಚ್ಚು ಹಾಲು ಕೊಡುತ್ತವೆ. ಸಂಗೀತ ಹಸುಗಳು ಮತ್ತು ಎಮ್ಮೆಗಳ ಮನಸ್ಸಿಗೆ ಮುದ ನೀಡುತ್ತದೆ. ದೇಹಕ್ಕೂ ವಿಶ್ರಾಂತಿ ಒದಗಿಸುತ್ತದೆ. ಪರಿಣಾಮ ಅವು ಹೆಚ್ಚು ಹಾಲು ನೀಡುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಮನುಷ್ಯರು ಸಂಗೀತವನ್ನು ಕೇಳಲು ಇಷ್ಟಪಡುವ ರೀತಿಯಲ್ಲಿ, ಹಸುಗಳು ಮತ್ತು ಎಮ್ಮೆಗಳು ಸಹ ಸಂಗೀತವನ್ನು ಇಷ್ಟಪಡುತ್ತವೆ. ಸಂಗೀತವನ್ನು ಕೇಳುವ ಹಸುಗಳು ಹೆಚ್ಚು ಹಾಲು ನೀಡುತ್ತವೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಸಂಗೀತದ ಅಲೆಗಳು ಹಸುವಿನ ಮಿದುಳಿನಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಹಾಲು ನೀಡಲು ಪ್ರೇರೇಪಿಸುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಈ ಸಂಶೋಧನೆಯ ಸಮಯದಲ್ಲಿ, ಹಸುಗಳನ್ನು ಒತ್ತಡ ಮುಕ್ತವಾಗಿಡಲು ಪ್ರಯತ್ನಗಳನ್ನು ಮಾಡಲಾಯಿತು. ಸಂಗೀತವನ್ನು ಕೇಳಿಸಿದಾಗ ಹಸುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಯನ್ನು ಗಮನಿಸಲಾಯಿತು. ಸಂಗೀತವು ಹಸುಗಳಿಗೆ ತೀವ್ರವಾದ ಶಾಖದಲ್ಲಿಯೂ ವಿಶ್ರಾಂತಿ ನೀಡುತ್ತದೆ ಎಂಬುದು ದೃಢಪಟ್ಟಿದೆ. ಸಂಗೀತ ನುಡಿಸಲು ಪ್ರಾರಂಭಿಸಿದಾಗ ಹಸು ಆರಾಮಾಗಿ ಕೂತು ಆಹಾರವನ್ನು ಮೆಲ್ಲಲು ಪ್ರಾರಂಭಿಸುತ್ತದೆ. ಇದರ ಪರಿಣಾಮ ಹಾಲಿನ ಉತ್ಪಾದನೆಯ ಮೇಲೂ ಗೋಚರವಾಗಿದೆ. ಹಾಲಿನ ಉತ್ಪಾದನೆ ಮೊದಲಿಗಿಂತ ಹೆಚ್ಚಾಗಿತ್ತು.
ಹಸುಗಳು ಯಾವಾಗ ಒತ್ತಡಕ್ಕೆ ಒಳಗಾಗುತ್ತವೆ ?
ನಾವು ಹಸುವನ್ನು ಒಂದೇ ಸ್ಥಳದಲ್ಲಿ ಕಟ್ಟಿದಾಗ ಅದು ಒತ್ತಡಕ್ಕೆ ಒಳಗಾಗುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ. ಆಗ ಅವು ಸರಿಯಾಗಿ ವರ್ತಿಸುವುದಿಲ್ಲ. ಗೋವುಗಳಿಗೆ ನೆಮ್ಮದಿಯ ವಾತಾವರಣ ಕಲ್ಪಿಸಿ ಅವುಗಳನ್ನು ಸಂಪೂರ್ಣವಾಗಿ ಒತ್ತಡದಿಂದ ಮುಕ್ತಗೊಳಿಸಿದರೆ ಚೆನ್ನಾಗಿ ಹಾಲು ಕೊಡುತ್ತವೆ ಅನ್ನೋದು ಸಂಶೋಧನೆಯಲ್ಲಿ ಖಚಿತವಾಗಿದೆ.