ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ತೀರ್ಪಿನ ಅನುಸಾರ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಇದೇ ಬರುವ ಏಪ್ರಿಲ್ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್ ಹೇಳಿದ್ದಾರೆ.
ಆ ಆದೇಶದ ಪ್ರಕಾರ ಮೊದಲ ಹಂತದಲ್ಲಿ ಹಳೆಯದಾದ ಡೀಸೆಲ್ ವಾಹನಗಳು ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ಗುರಗಾಂವ್ನಲ್ಲಿ ರಸ್ತೆಗಳಿಂದ ತೆಗೆದು ಹಾಕಲಾಗುತ್ತದೆ ಎಂದು ಹೇಳಿದರು. ಇನ್ನು ಆಟೋ ಚಾಲಕರಿಗೆ ತಮ್ಮ ಆಟೋಗಳನ್ನು ಬದಲಾಯಿಸಲು ಸಮಯ ನೀಡಲಾಗುವುದು ಎಂದು ಹೇಳಿದರು.
ಗುರುಗಾಂವ್ನಲ್ಲಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ ನಡೆಸಿದ ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಮಾರ್ಚ್ 10ರಂದು ಒಂದು ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಇಲ್ಲಿ ತಮ್ಮ ಹಳೆಯ ಆಟೋಗಳನ್ನು ನೀಡಿ ಹೊಸ ಇ ಆಟೋಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.