ದಮ್ ಬಿರಿಯಾನಿ ಬಗ್ಗೆ ಕೇಳಿದ್ದೇವೆ. ಯಾವುದು ಈ ಕುಂಬಳಕಾಯಿ ಬಿರಿಯಾನಿ ಅಂತ ಯೋಚಿಸುತ್ತಿದ್ದೀರಾ. ಮಾಡಲು ತುಸು ಕಷ್ಟವಾದರೂ ಬಹಳ ಸ್ವಾದಿಷ್ಟವಾದ ಅಪರೂಪದ ಸಸ್ಯಹಾರಿ ಬಿರಿಯಾನಿ ಇದು. ಇದನ್ನು ತಯಾರಿಸುವುದು ಹೇಗೆ ಅನ್ನುವ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಕೇಸರಿದಳ – 1 ಚಿಟಿಕೆ
ಕತ್ತರಿಸಿದ ಈರುಳ್ಳಿ – 1/2 ಕೆಜಿ
ಬೆಣ್ಣೆ – 1 1/2 ಲೋಟ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳು – 8
ಸಣ್ಣಗೆ ಹೆಚ್ಚಿದ ಶುಂಠಿ – 1 ಚಮಚ
ಒಣಮೆಣಸಿನಕಾಯಿ ಪುಡಿ – 3/4 ಚಮಚ
ಏಲಕ್ಕಿ ಪುಡಿ – 1 ಚಮಚ
ತುರಿದ ಜಾಯಿಕಾಯಿ – 1/2 ಚಮಚ
ಚಕ್ಕೆ ಚೂರು – 3
ಲವಂಗ – 6
ದಾಲ್ಚಿನ್ನಿ ಎಲೆ – 3
ಜಾಯಿ ಪತ್ರೆ – 2
ಗರಂಮಸಾಲೆ – 2 ಚಮಚ
ಹಸಿಮೆಣಸಿನಕಾಯಿ – 1
ನಿಂಬೆಹಣ್ಣು -3
ಸಣ್ಣ ಸಿಹಿಕುಂಬಳಕಾಯಿ – 4
ಕೆನೆಮೊಸರು – 2 ಲೋಟ
ಬಾಸುಮತಿ ಅಕ್ಕಿ – 3 ಲೋಟ
ಪುದೀನಾ ಎಲೆ – 1 ಮುಷ್ಟಿ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ನಾಲ್ಕು ದೊಡ್ಡ ಚಮಚ ಬಿಸಿ ಬಿಸಿಯಾದ ನೀರಿಗೆ ಕೇಸರಿ ದಳ ಸೇರಿಸಿ ಅರ್ಧ ಗಂಟೆ ಮುಚ್ಚಿಡಬೇಕು.
ಬೆಳ್ಳುಳ್ಳಿ ಶುಂಠಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಬಾಣಲೆಯಲ್ಲಿ ಒಂದು ಲೋಟ ಬೆಣ್ಣೆಯನ್ನು ಕರಗಿಸಿಕೊಳ್ಳಬೇಕು.
ಮತ್ತೊಂದು ಪಾತ್ರೆಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿ, ಒಣಮೆಣಸಿನಕಾಯಿ ಪುಡಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಜಾಯಿ ಪತ್ರೆ, ದಾಲ್ಚಿನ್ನಿ ಎಲೆ, ಚಕ್ಕೆ, ಲವಂಗ, ಹೆಚ್ಚಿದ ಹಸಿಮೆಣಸಿನಕಾಯಿ, ನಿಂಬೆಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2 ನಿಮಿಷ ಬೇಯಿಸಬೇಕು.
ಬಾಸುಮತಿ ಅಕ್ಕಿಯನ್ನು 15 ನಿಮಿಷ ನೆನೆಯಲು ಬಿಡಬೇಕು. ಸಿಹಿ ಕುಂಬಳಕಾಯಿಯ ಅರ್ಧಭಾಗದ ಮೇಲೆ ಅಂದರೆ ಪಾತ್ರೆಯ ಮುಚ್ಚಳ ತೆಗೆಯುವ ಹಾಗೆ ಕತ್ತರಿಸಬೇಕು. ನಂತರ ಒಳಗಿರುವ ಬೀಜವನ್ನು ಚಾಕುವಿನಿಂದ ತೆಗೆಯಬೇಕು. ಸಿಹಿ ಕುಂಬಳಕಾಯಿಯ ಒಳಗೆ ಈರುಳ್ಳಿ ಮಸಾಲೆ ಮಿಶ್ರಣವನ್ನು ತುಂಬಿ ಕುಕ್ಕರ್ ನಲ್ಲಿ ಅಥವಾ ಓವೆನ್ ನಲ್ಲಿ ಮೃದುವಾಗಿ ಬೇಯಿಸಿಕೊಳ್ಳಬೇಕು.
ಬೆಂದಿರುವ ಮಸಾಲೆ, ಕುಂಬಳಕಾಯಿಯನ್ನು ಚಾಕು ಅಥವಾ ಹರಿತವಾದ ಚಮಚದಿಂದ ಸ್ವಲ್ಪ ತಿರುಳು ಬಿಟ್ಟು ಹೆರೆದು ತೆಗೆಯಬೇಕು. ಇದನ್ನು ಒಂದು ಪಾತ್ರೆಗೆ ಹಾಕಿ ಕೆನೆಮೊಸರು ಸ್ವಲ್ಪ ಉಪ್ಪು ಸೇರಿಸಿ ಕಲಸಿಕೊಳ್ಳಬೇಕು.
ಬೇರೊಂದು ಪಾತ್ರೆಯಲ್ಲಿ ಕುದಿಯುವ ನೀರಿಗೆ ಆಗಲೇ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಅರ್ಧಂಬರ್ಧ ಬೇಯಿಸಿ ಬಸಿಯಿರಿ. ಈ ಅರ್ಧಂಬರ್ಧ ಅನ್ನವನ್ನು ಖಾಲಿ ಮಾಡಿಟ್ಟ ಸಿಹಿಕುಂಬಳದೊಳಗೆ ತುಂಬಿ ಮಸಾಲೆ, ಸಿಹಿ ಕುಂಬಳ ತಿರುಳಿನ ಹೂರಣವನ್ನು ತುಂಬಬೇಕು.
ಅದರ ಮೇಲೆ ಮತ್ತಷ್ಟು ಅನ್ನ, ಉಳಿದ ಅರ್ಧ ಲೋಟ ಬೆಣ್ಣೆ, ಕೇಸರಿದಳ ಮತ್ತು ಅದನ್ನು ನೆನೆಸಿಟ್ಟ ನೀರು, ಪುದೀನ ಎಲೆಗಳನ್ನು ಒಂದರ ಮೇಲೊಂದು ಹಾಕಿ ಕುಕ್ಕರ್ ಅಥವಾ ಓವೆನ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಈಗ ಹಬೆಯಾಡುವ ಬಿಸಿ ಬಿಸಿ ಸಿಹಿ ಕುಂಬಳಕಾಯಿ ಬಿರಿಯಾನಿಯನ್ನು ಮಸಾಲೆಯ ಘಮದೊಂದಿಗೆ ಸವಿಯಲು ಬಹಳ ರುಚಿಯಾಗಿರುತ್ತದೆ.