ಏಪ್ರಿಲ್ 5ರಂದು ಕಣ್ಮರೆಯಾಗಿದ್ದ 14 ವರ್ಷ ಬಾಲಕಿಯ ಮೃತದೇಹವು ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಹಾಗೂ ಅತ್ಯಾಚಾರಿ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಲಾಗಿದ್ದ ಆಲ್ಟೋ ಕಾರಿನಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಳುಹಿಸಿಕೊಟ್ಟಿದ್ದಾರೆ.
ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ನಡೆಸಲು ಪೊಲೀಸರು ಆಶ್ರಮಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಉತ್ತರ ಪ್ರದೇಶದ ಗೊಂಡಾದ ದೇಹತ್ ಕೊಟ್ವಾಲಿ ಪ್ರದೇಶದಲ್ಲಿ ಇರುವ ಆಶ್ರಮವನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ವಿಧಿವಿಜ್ಞಾನ ತಜ್ಞರು ಪೊಲೀಸರಿಗೆ ಸಲಹೆ ನೀಡುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ಕಾರಿನಲ್ಲಿ ಬಚ್ಚಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
2018ರಲ್ಲಿ ಜೋಧ್ಪುರ ವಿಶೇಷ ನ್ಯಾಯಾಲಯವು ಅತ್ಯಾಚಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆಯನ್ನು ಘೋಷಣೆ ಮಾಡಿತ್ತು. 2013ರಲ್ಲಿ ಜೋಧ್ಪುರ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅಸಾರಂ ಬಾಪು ಅತ್ಯಾಚಾರವೆಸಗಿರುವುದು ಸಾಬೀತಾಗಿತ್ತು.