ಶಿವಮೊಗ್ಗ: ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಬಿ.ವೈ. ರಾಘವೇಂದ್ರ ಮತ್ತು ಅವರ ತಂದೆ ವಾಮಾಚಾರದಂತಹ ಕೃತ್ಯಕ್ಕೆ ಕೈಹಾಕಿರುವುದು ರಾಕ್ಷಸೀ ಕೃತ್ಯವಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅಪ್ಪ, ಮಕ್ಕಳ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ಮುಂದುವರೆಸಿದರು.
ತಮ್ಮ ಚುನಾವಣಾ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿರುವ ರಾಷ್ಟ್ರಭಕ್ತ ಬಳಗದ ಚುನಾವಣಾ ಕಚೇರಿ ಮುಂದೆ ವಾಮಾಚಾರ ಮಾಡಲಾಗಿದೆ. ಲಿಂಬೆ ಹಣ್ಣು, ಗೊಂಬೆ, ಕುಂಕುಮ ಬಳಸಲಾಗಿದೆ. ಇಂತಹ ವಾಮಾಚಾರಗಳಿಗೆಲ್ಲಾ ನಾನು ಜಗ್ಗುವುದಿಲ್ಲ. ಧರ್ಮ ಮತ್ತು ದೇವರು ನನ್ನೊಂದಿಗೆ ಇದ್ದಾರೆ ಎಂದರು.
ಹಾಗೆಯೇ ಶಿರಾಳಕೊಪ್ಪದಲ್ಲಿ ನಡೆದ ಘಟನೆಯಂತೂ ತೀರಾ ಖಂಡನೀಯವಾಗಿದೆ. ಚುನಾವಣಾ ಭಾಷಣಕ್ಕಾಗಿ ನಮ್ಮ ಕಾರ್ಯಕರ್ತರು ವೇದಿಕೆ ಸಿದ್ಧಪಡಿಸಿದ್ದರು. ಎಲ್ಲಾ ಇಲಾಖೆಗಳಿಂದಲೂ ಅನುಮತಿ ಪಡೆಯಲಾಗಿತ್ತು. ಅದು ದೇವಸ್ಥಾನದ ಜಾಗವಾಗಿದ್ದರಿಂದ ದೇವಸ್ಥಾನದ ಆಡಳಿತ ಮಂಡಳಿಯವರೂ ಅನುಮತಿ ನೀಡಿದ್ದರು. ಆದರೆ, ಕೆಲವು ಗೂಂಡಾಗಳು ಬೆದರಿಕೆ ಹಾಕಿ ಅಲ್ಲಿದ್ದ ಕುರ್ಚಿ, ಮೈಕ್ ಗಳನ್ನೆಲ್ಲಾ ನಾಶ ಮಾಡಿ, ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಆದರೂ ನಮ್ಮ ಭಾಷಣ ಕೇಳಲು ಬಂದಿದ್ದವರು ಯಾರೂ ಕದಲಲಿಲ್ಲ ಎಂದರು.
ಬಹುಶಃ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷದವರೂ ಇಂತಹ ಅಡ್ಡಿಪಡಿಸುವ ಕೆಲಸವನ್ನು ಇದುವರೆಗೂ ಮಾಡಿರಲಿಲ್ಲ. ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂತಹ ಕೃತ್ಯ ನಡೆದಿರುವುದು ಪ್ರಥಮವಾಗಿದೆ. ಘಟನೆಯಿಂದ ಭಯಭೀತಿ ವಾತಾವರಣ ನಿರ್ಮಾಣವಾಗಿದೆ. ಜನರು ಸಹ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.
ಇಲ್ಲಿನ ಬಿಜೆಪಿ ಕಾರ್ಯಕರ್ತರೇ ಹೇಳುವಂತೆ ರಾಘವೇಂದ್ರರ ಜೊತೆ ಅನಿವಾರ್ಯವಾಗಿ ಹೋಗಬೇಕಾಗುತ್ತದೆ ಆದರೆ, ಮತ ನಿಮಗೇ ಹಾಕುತ್ತೇವೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.
ಇಂದು ಬಹು ಸಂತೋಷವಾಗಿದೆ. ಕಾರಣ ಮೋದಿ ಅವರು ನನ್ನ ಜೊತೆಗೇ ಉಳಿದಿದ್ದಾರೆ. ಮೋದಿ ಫೋಟೋ ಬಳಸಬಾರದು ಎಂದು ಕೋರ್ಟ್ ಗೆ ಹೋದವರು ಈಗ ತೆಪ್ಪಗಾಗಿದ್ದಾರೆ. ಕೋರ್ಟ್ ಆಗಲಿ, ಚುನಾವಣಾ ಆಯೋಗವಾಗಲಿ ಇವರ ಕೋರಿಕೆಗೆ ಸೊಪ್ಪು ಹಾಕಿಲ್ಲ, ನರೇಂದ್ರ ಮೋದಿ ಅವರ ಫೋಟೋವನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದಾಗಿದೆ ಎಂದರು.
ಹಿಂದೂ ಕಾರ್ಯಕರ್ತರ ಮೇಲೆ ಸರ್ಕಾರ ಸುಳ್ಳು ಕೇಸ್ ಹಾಕಿ ತೊಂದರೆ ಕೊಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ ವರ್ಗದ ಜನ ಹಾಗೂ ಬಿಜೆಪಿ ದೊಡ್ಡ ಗುಂಪು ನನ್ನ ಜೊತೆಯಲ್ಲಿದ್ದಾರೆ ಎಂದರು.