ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಕ್ಡೌನ್ ಜಾರಿಯಾದಾಗಿನಿಂದ ಅನೇಕ ಜನರ ಪಾಲಿಗೆ ರಿಯಲ್ ಲೈಫ್ ಹಿರೋ ಎನಿಸಿರುವ ಬಾಲಿವುಡ್ ನಟ ಸೋನುಸೂದ್ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. 2020ರಿಂದ ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿರುವ ಸೋನು ಸೂದ್ ಈಗಲೂ ಕೂಡ ತಮ್ಮ ಮಾನವೀಯ ಕಾರ್ಯವನ್ನು ಮುಂದುವರಿಸುತ್ತಲೇ ಇದ್ದಾರೆ.
ಈ ಬಾರಿ ನಟ ಸೋನು ಸೂದ್ ತಮ್ಮ ಹುಟ್ಟೂರು ಮೊಗಾದ ಜನತೆಗೆ ನೆರವಾಗಿದ್ದಾರೆ. ಸೋನು ತಮ್ಮ ಸಹೋದರಿ ಮಾಳಾವಿಕಾ ಸೂದ್ ಸಾಚಾರ್ ಜೊತೆ ಸೇರಿ ಮೊಗಾ ಕಿ ಬೆಟಿ ಎಂಬ ಯೋಜನೆಯ ಹೆಸರಿನಲ್ಲಿ ಕನಿಷ್ಟ 1000 ಕುಟುಂಬಗಳಿಗೆ ನೆರವಾಗಿದ್ದಾರೆ. ಸೋನು ಸೂದ್ ಹಾಗೂ ಅವರ ಸಹೋದರಿ ಸೇರಿ ಈ ಭಾಗದ ಸರಿ ಸುಮಾರು 40 ರಿಂದ 45 ಹಳ್ಳಿಗಳ ಶಾಲಾ ಬಾಲಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ 1000 ಬೈಸಿಕಲ್ಗಳನ್ನು ಉಚಿತವಾಗಿ ನೀಡಿದ್ದಾರೆ.
ಈ ಹೊಸ ಯೋಜನೆಯ ಬಗ್ಗೆ ಮಾತನಾಡಿದ ಸೋನು ಸೂದ್, ಇಲ್ಲಿನ ಮಕ್ಕಳಿಗೆ ಶಾಲೆಗಳಿಗೆ ತೆರಳಬೇಕು ಅಂದರೆ ಸಾಕಷ್ಟು ದೂರ ಕ್ರಮಿಸಬೇಕು. ಕೊರೆಯುವ ಚಳಿಯಲ್ಲಿ ಮಕ್ಕಳಿಗೆ ಬಹುಬೇಗನೇ ಶಾಲೆಗೆ ತೆರಳುವುದು ತುಂಬಾನೇ ಕಷ್ಟಕರವಾಗಿದೆ. ಮಕ್ಕಳ ಈ ಕಷ್ಟವು ನಮ್ಮ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾವು 8 ರಿಂದ 12 ನೇ ತರಗತಿಯ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ನೀಡಿದ್ದೇವೆ ಎಂದು ಹೇಳಿದರು. ಯಾವ ಮಕ್ಕಳಿಗೆ ಸೈಕಲ್ನ ಅವಶ್ಯಕತೆ ಇದೆ ಎಂಬುದನ್ನು ಸರ್ಕಾರಿ ಶಾಲೆಯ ಶಿಕ್ಷಕರೇ ಪಟ್ಟಿ ಮಾಡಿ ನಮಗೆ ನೀಡಿದ್ದರು ಎಂದೂ ಸೋನು ಇದೇ ವೇಳೆ ಹೇಳಿದರು.