ಶಿವಪಾಲ್ ಹಾಗೂ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮತ್ತು ಸೋದರಳಿಯ ಅಖಿಲೇಶ್ ಯಾದವ್ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಗತಿಶೀಲ ಸಮಾಜವಾದಿ ಪಕ್ಷದ ಶಿವಪಾಲ್ ಯಾದವ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ರನ್ನು ಲಕ್ನೋದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಶಿವಪಾಲ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಶಿವಪಾಲ್ ಕೂಡ ಸೊಸೆಯ ಹಾದಿಯನ್ನೇ ತುಳಿಯುತ್ತಾರಾ..? ಎಂಬ ಅನುಮಾನ ಮೂಡಿದೆ.
ಶಿವಪಾಲ್ ಯಾದವ್ ಹಾಗೂ ಯೋಗಿ ಆದಿತ್ಯನಾಥ್ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಶಿವಪಾಲ್ ಯಾದವ್ ಆಕ್ರೋಶ ಹೊರ ಹಾಕಿದ ನಾಲ್ಕು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.