ಪಾಯಸ ಭಾರತದ ಅತ್ಯಂತ ಜನಪ್ರಿಯ ತಿನಿಸು. ಇದೊಂದು ಸಿಂಪಲ್ ಡಿಶ್ ಆಗಿರೋದ್ರಿಂದ ಎಲ್ಲಾ ವಯಸ್ಸಿನವರೂ ಸವಿಯಬಹುದು. ಪಾಯಸದಲ್ಲೂ ಹಲವಾರು ವೆರೈಟಿಗಳಿವೆ. ಸೇಬು ಹಣ್ಣಿನಿಂದ್ಲೂ ಟೇಸ್ಟಿ ಖೀರು ತಯಾರಿಸಬಹುದು. ಅದ್ಹೇಗೆ ಅಂತಾ ನೋಡೋಣ.
ಬೇಕಾಗುವ ಸಾಮಗ್ರಿ : 1 ಸೇಬು ಹಣ್ಣು, 1 ಚಮಚ ತುಪ್ಪ, 3 ಕಪ್ ಹಾಲು, ಕಾಲು ಚಮಚ ಕೇಸರಿ, ಕಾಲು ಕಪ್ ಕಂಡೆನ್ಸ್ಡ್ ಮಿಲ್ಕ್, ಕಾಲು ಚಮಚ ಏಲಕ್ಕಿ ಪುಡಿ, 2 ಚಮಚದಷ್ಟು ಹೆಚ್ಚಿದ ಡ್ರೈಪ್ರೂಟ್ಸ್.
ಮಾಡುವ ವಿಧಾನ : ಸೇಬು ಹಣ್ಣಿನ ಸಿಪ್ಪೆ ತೆಗೆದು ತುರಿದುಕೊಳ್ಳಿ. ಅದನ್ನು ಬಾಣೆಲೆಗೆ ಹಾಕಿ 1 ಚಮಚ ತುಪ್ಪ ಬೆರೆಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಸೇಬು ಹಣ್ಣು ಚೆನ್ನಾಗಿ ಬೆಂದ ಬಳಿಕ ಗ್ಯಾಸ್ ಆಫ್ ಮಾಡಿ. ಅದು ತಣ್ಣಗಾಗಲು ಬಿಡಿ.
ಇನ್ನೊಂದು ಪಾತ್ರೆಯಲ್ಲಿ ಹಾಲು ಮತ್ತು ಕೇಸರಿ ಹಾಕಿ ಕುದಿಸಿ. ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಕೂಡ ಹಾಕಿ ಮಿಕ್ಸ್ ಮಾಡಿ. 10 ನಿಮಿಷ ಅಂದರೆ ಹಾಲು ಸ್ವಲ್ಪ ದಪ್ಪ ಆಗುವವರೆಗೆ ಕುದಿಸಿ. ಏಲಕ್ಕಿ ಪುಡಿ ಬೆರೆಸಿ, ಹಾಲು ಸಂಪೂರ್ಣ ತಣ್ಣಗಾಗಲು ಬಿಡಿ. ನಂತರ ಸೇಬಿನ ಮಿಶ್ರಣವನ್ನು ಅದಕ್ಕೆ ಬೆರೆಸಿ.
ಹಾಲು ಅಥವಾ ಸೇಬಿನ ಮಿಶ್ರಣ ಬಿಸಿಯಾಗಿದ್ದಾಗ ಪರಸ್ಪರ ಬೆರೆಸಬೇಡಿ. ಹಾಲು ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಖೀರನ್ನು ಅರ್ಧ ಗಂಟೆ ಫ್ರಿಡ್ಜ್ ನಲ್ಲಿಟ್ಟು, ಬಳಿಕ ಡ್ರೈಫ್ರೂಟ್ಸ್ ನಿಂದ ಅಲಂಕರಿಸಿ ಸರ್ವ್ ಮಾಡಿ.