ಬಿಸಿ ಅನ್ನಕ್ಕೆ ರಸಂ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಕಾಲಿಫ್ಲವರ್ ರಸಂ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ತುಂಬಾ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಚಿಕ್ಕದ್ದಾಗಿ ಕತ್ತರಿಸಿಕೊಂಡ ಕಾಲಿಫ್ಲವರ್ – 1 ಕಪ್, ತೊಗರಿಬೇಳೆ – 1/4 ಕಪ್, ಹುಣಸೆಹಣ್ಣು – 1 ಟೀ ಸ್ಪೂನ್, ಟೊಮೆಟೊ – 1, ಹಸಿಮೆಣಸು – 2, ಬೆಳ್ಳುಳ್ಳಿ – 5 ಎಸಳು, ಸಕ್ಕರೆ – 1/4 ಟೀ ಸ್ಪೂನ್, ಅರಿಶಿನ – 1/4 ಟೀ ಸ್ಪೂನ್, ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್, ಧನಿಯಾ ಬೀಜ – 1 ಟೀ ಸ್ಪೂನ್, ಕಾಳು ಮೆಣಸು – 1 ಟೀ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಒಣಮೆಣಸು – 2, ಎಣ್ಣೆ – 2 ಟೀ ಸ್ಪೂನ್, ಚಕ್ಕೆ – 1 ಇಂಚು, ಮೆಂತೆ – 1/2 ಟೀ ಸ್ಪೂನ್, ಕರಿಬೇವು – 5 ಎಸಳು.
ಮಾಡುವ ವಿಧಾನ:
ಹುಣಸೆಹಣ್ಣನ್ನು ಒಂದು ಬೌಲ್ ಗೆ ಹಾಕಿಕೊಂಡು 1 ಕಪ್ ನೀರು ಸೇರಿಸಿ ನೆನೆಸಿಟ್ಟುಕೊಳ್ಳಿ. ಸಣ್ಣಗೆ ಹಚ್ಚಿಟ್ಟುಕೊಂಡ ಕಾಲಿಫ್ಲವರ್ ಅನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಉಗುರು ಬೆಚ್ಚಗಿನ ನೀರು, ಉಪ್ಪು, ಅರಿಶಿನ ಸೇರಿಸಿ 10 ನಿಮಿಷಗಳ ಕಾಲ ನೆನೆಸಿಡಿ. ಕುಕ್ಕರ್ ಗೆ ಬೇಳೆ ಹಾಕಿ 1 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ.
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಸೇರಿಸಿ ಅದು ಕುದಿ ಬರುತ್ತಿದ್ದಂತೆ ಕಾಲಿಫ್ಲವರ್, ಕತ್ತರಿಸಿದ ಟೊಮೆಟೊ, ಸೀಳಿದ ಹಸಿಮೆಣಸು, ಅರಿಶಿನ , ಉಪ್ಪು ಹಾಕಿ ಕುದಿಸಿಕೊಳ್ಳಿ. ಕಾಲಿಫ್ಲವರ್ ಬೇಯುತ್ತಿದ್ದಂತೆ ಅದಕ್ಕೆ ಹುಣಸೆಹಣ್ಣಿನ ರಸ ಸೇರಿಸಿ ಕುದಿಸಿಕೊಳ್ಳಿ.
ಒಂದು ಮಿಕ್ಸಿ ಜಾರಿಗೆ ಕಾಳು ಮೆಣಸಿನಕಾಳು, ಧನಿಯಾ, ಜೀರಿಗೆ, ಒಣಮೆಣಸು ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಿ.ಇದನ್ನು ಕುದಿಯುತ್ತಿರುವ ರಸಂಗೆ ಹಾಕಿ. ನಂತರ ಬೇಯಿಸಿದ ಬೇಳೆ ಸೇರಿಸಿ. ಜಜ್ಜಿದ ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಚಕ್ಕೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಂಡು ಅದನ್ನು ಈ ಸಾರಿಗೆ ಹಾಕಿ. ರುಚಿಕರವಾದ ರಸಂ ಸವಿಯಲು ಸಿದ್ಧ.