ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ.
ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ.
ಬೇಕಾಗುವ ಸಾಮಗ್ರಿಗಳು:
1 ಲೀಟರ್ – ಹಾಲು, ¼ ಕಪ್ – ಬಾಸುಮತಿ ಅಕ್ಕಿ, ½ ಕಪ್ – ಸಕ್ಕರೆ, 3 ಟೇಬಲ್ ಸ್ಪೂನ್ – ಕೊಬ್ಬರಿ ತುರಿ, 1 ಟೀ ಸ್ಪೂನ್ – ಏಲಕ್ಕಿ ಪುಡಿ, 2 ಟೇಬಲ್ ಸ್ಪೂನ್ – ಗೋಡಂಬಿ, 2 ಟೇಬಲ್ ಸ್ಪೂನ್ – ಬಾದಾಮಿ, ರೋಸ್ ಎಸೆನ್ಸ್ – 4 ಹನಿ.
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಕುದಿಸಿಕೊಳ್ಳಿ. ನಂತರ ಗ್ಯಾಸ್ ಉರಿ ಕಡಿಮೆ ಮಾಡಿಕೊಳ್ಳಿ. ಇದಕ್ಕೆ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಅಕ್ಕಿ ಬೆಂದ ನಂತರ ಒಂದು ಸೌಟಿನ ಸಹಾಯದಿಂದ ನಿಧಾನಕ್ಕೆ ಇದನ್ನು ಅಲ್ಲಿಯೇ ಒತ್ತಿ. ಅದು ಮೆತ್ತಗಾಗಿ ಹಾಲಿನೊಂದಿಗೆ ಚೆನ್ನಾಗಿ ಬೆರೆಯುತ್ತದೆ.
ಇದಕ್ಕೆ ಸಕ್ಕರೆ, ಕತ್ತರಿಸಿದ ಬಾದಾಮಿ, ಗೋಡಂಬಿ ಚೂರು, ಏಲಕ್ಕಿ ಪುಡಿ, ಕೊಬ್ಬರಿ ತುರಿ ಹಾಕಿ 1 ನಿಮಿಷಗಳ ಕಾಲ ಬೇಯಿಸಿಕೊಂಡು ರೋಸ್ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಪ್ರಿಡ್ಜ್ ನಲ್ಲಿಡಿ. ನಂತರ ಇದನ್ನು ಸರ್ವ್ ಮಾಡಿದರೆ ರುಚಿಕರವಾಗಿರುತ್ತದೆ.