38 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ದೆಹಲಿ – ಗುರುಗ್ರಾಮ ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ಇರಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಸಚಿನ್ ಎಂದು ಗುರುತಿಸಲಾಗಿದೆ. ಆಗಸ್ಟ್ 20ರಂದು ರಾತ್ರಿ 9:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆಘಾತಕಾರಿ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರ ರಾತ್ರಿ 8:15ರ ಸುಮಾರಿಗೆ ಆರೋಪಿ ಹಾಗೂ ಮಹಿಳೆ ಹೋಟೆಲ್ ತಲುಪಿದ್ದರು. ಸುಮಾರು 1 ಗಂಟೆ ಒಳಗಾಗಿಯೇ ಅವರಿಗೆ ಹೋಟೆಲ್ ರೂಮ್ ನೀಡಲಾಗಿತ್ತು. ಸುಮಾರು 15 ನಿಮಿಷಗಳ ಬಳಿಕ ಕೊಠಡಿಯಿಂದ ಆರೋಪಿ ಓಡಿ ಹೋಗಿದ್ದಾನೆ. ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಹೋಟೆಲ್ನ ಮೆಟ್ಟಿಲಿನ ಬಳಿ ಕುಸಿದು ಬಿದ್ದಿದ್ದಳು.
ಹೋಟೆಲ್ ಸಿಬ್ಬಂದಿ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಪತಿಯನ್ನೂ ಸಂಪರ್ಕಿಸಲಾಗಿದೆ. ಸೆಕ್ಟರ್ 14 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆಯನ್ನು ಇಮ್ರಾನಾ ಎಂದು ಗುರುತಿಸಲಾಗಿದೆ. ಈಕೆ ಉತ್ತರ ಪ್ರದೇಶದ ಆಗ್ರಾದ ನಿವಾಸಿಯಾಗಿದ್ದಳು ಎನ್ನಲಾಗಿದೆ.
ಮೃತ ಮಹಿಳೆಯ ಪತಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ ಇಮ್ರಾನಾ ತಮ್ಮ ಪತಿ ಸ್ನೇಹಿತ ಸಚಿನ್ರನ್ನು ಭೇಟಿಯಾಗಲು ರಿಂಕು ಎಂಬವರ ಆಟೋರಿಕ್ಷಾದಲ್ಲಿ ಐಎಫ್ಎಫ್ಓ ಚೌಕ್ಗೆ ತೆರಳಿದ್ದಳು ಎನ್ನಲಾಗಿದೆ.
ಇಮ್ರಾನಾಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದರಿಂದ ಆಕೆ ಮೂರೇ ನಿಮಿಷದಲ್ಲಿ ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹೋಟೆಲ್ನಲ್ಲಿ ನಕಲಿ ಐಡಿ ನೀಡಿದ್ದಾನೆ ಎಂದು ತಿಳಿದುವಂದಿದೆ. ಇಲ್ಲಿಯವರೆಗೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.