ಬೆಳಗಾವಿ: ’ಅತ್ಯಾಚಾರ ತಡೆಯಲಾಗದಿದ್ದರೆ ಮಲಗಿ ಆನಂದಿಸಿ’ ಎಂಬ ತಾವು ನೀಡಿದ್ದ ಅಕ್ಷಮ್ಯ ಹೇಳಿಕೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕ್ಷಮೆಯಾಚಿಸಿದ್ದಾರೆ.
ಇಂದು ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ರಮೇಶ್ ಕುಮಾರ್, ತಾವು ನಿನ್ನೆ ನೀಡಿದ್ದ ಹೇಳಿಕೆಗೆ ಕ್ಷಮೆಯಿರಲಿ. ಹೆಣ್ಣನ್ನು ಅವಮಾನ ಮಾಡಬೇಕು ಎಂಬ ಉದ್ದೇಶದಿಂದಾಗಲಿ, ನೋವುಂಟು ಮಾಡಬೇಕು ಎಂಬ ಕಾರಣಕ್ಕಾಗಲಿ ನಾನು ಆ ಹೇಳಿಕೆ ನೀಡಿಲ್ಲ. ಪರಿಸ್ಥಿತಿ ವಿವರಿಸುವ ಸಂದರ್ಭದಲ್ಲಿ ಇಂಗ್ಲೀಷ್ ಬರಹಗಾರರು ಬರೆದಿದ್ದ ಕೆಲ ಸಾಲನ್ನು ಉಲ್ಲೇಖಿಸಿದ್ದೆ ಎಂದರು.
ರೋಗಿ ಕಿಡ್ನಿಯಿಂದ ಬರೋಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು…!
ನನ್ನ ಹೇಳಿಕೆಗೆ ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ. ದೇಶದ ಯಾವುದೇ ಮೂಲೆಯಲ್ಲಿರುವ ಮಹಿಳೆಯರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ. ಲಘುವಾಗಿ ವರ್ತಿಸಬೇಕು ಎಂಬ ಉದ್ದೇಶ ನನಗಿಲ್ಲ. ಕ್ಷಮೆ ಕೇಳಲು ಪ್ರತಿಷ್ಠೆ ಅಡ್ಡಿ ಎನ್ನುವ ಮನೋಭಾವವೂ ಇಲ್ಲ, ಕ್ಷಮೆ ಯಾಚಿಸುವುದರಿಂದ ಸಮಾಧಾನವಾಗಲಿದೆ ಎನ್ನುವುದಾದರೆ ನಾನು ಕ್ಷಮೆಯಾಚಿಸುವುದರಲ್ಲಿ ತಪ್ಪಿಲ್ಲ. ಹಾಗಾಗಿ ನನ್ನ ಹೇಳಿಕೆಯಿಂದ ಯಾರಿಗೇ ನೊವಾಗಿದ್ದರೂ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದರು.
ಇನ್ನು ಇದೇ ವಿಚಾರವಾಗಿ ಸದನದ ಸಮಯ ಹಾಳುಮಾಡುವುದು ಬೇಡ. ಮನಃಪೂರ್ವಕವಾಗಿ ಕ್ಷಮೆ ಕೋರಿದ್ದೇನೆ. ಹಾಗಾಗಿ ಕಲಾಪ ಮುಂದುವರೆಯಲಿ ಎಂದು ಮನವಿ ಮಾಡಿದರು.