
ಅರ್ಧಕ್ಕೆ ಶಾಲೆಯನ್ನು ಮೊಟಕುಗೊಳಿಸಿದ್ದರೂ ಸಹ 32 ವರ್ಷದ ಶ್ಯಾಮ್ ಚೌರಾಸಿಯಾ ಎಂಬವರು ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಹಾಯ ಮಾಡುವಂತಹ ಪುಟ್ಟ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಆಭರಣಗಳಲ್ಲಿ ಅಳವಡಿಸಬಹುದಾಗಿದೆ.
ಇದು ಜಿಪಿಎಸ್ ವ್ಯವಸ್ಥೆಯನ್ನು ಹೊಂದಿದ್ದು ಯಾರಾದರೂ ಮಹಿಳೆಯರ ಜೊತೆ ಅನುಚಿತ ವರ್ತನೆಯನ್ನು ತೋರಿದ್ದು ಗಮನಕ್ಕೆ ಬಂದಲ್ಲಿ ಕೂಡಲೇ ಪೊಲೀಸ್ ಹಾಗೂ ಮಹಿಳೆಯರ ಹತ್ತಿರದ ಸಂಬಂಧಿಗಳಿಗೆ ಫೋನ್ ಮೂಲಕ ಮಾಹಿತಿ ಸಿಗಲಿದೆ.
ಶ್ಯಾಮ್ ಮೀರತ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿಯಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಅಟಲ್ ಕಮ್ಯೂನಿಟಿ ಇನ್ನೋವೇಶನ್ ಸೆಂಟರ್ ಶ್ಯಾಮ್ಗೆ ಇಂತಹದ್ದೊಂದು ಸಾಧನವನ್ನು ತಯಾರಿಸಲು ವೇದಿಕೆಯನ್ನು ಕಲ್ಪಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಎಂಐಇಟಿ ಉಪಾಧ್ಯಕ್ಷ ಪುನೀತ್ ಅರ್ಗವಾಲ್, ನಾನು 8 ತಿಂಗಳ ಹಿಂದೆ ದೆಹಲಿಯ ಎಕ್ಸಿಬಿಷನ್ ಒಂದರಲ್ಲಿ ಶ್ಯಾಮ್ರನ್ನು ಮೊದಲ ಬಾರಿಗೆ ಭೇಟಿಯಾದೆ. ಬಳಿಕ ನಾವು ಅವರನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದೆವು. ಅವರಿಗೆ ತಂತ್ರಜ್ಞಾನದ ಬಗ್ಗೆ ಅತಿಯಾದ ಜ್ಞಾನವಿದೆ ಎಂದು ಹೇಳಿದರು.