ಕೊಲೊಂಬೋ: ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ದ್ವೀಪ ರಾಷ್ಟ್ರದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ವಾಹನಕ್ಕೆ ಇಂಧನ ಸಿಗದ ಕಾರಣ ಎರಡು ದಿನದ ನವಜಾತ ಶಿಶುವೊಂದು ಮೃತಪಟ್ಟಿರೋ ಘಟನೆ ನಡೆದಿದೆ.
ಸೆಂಟ್ರಲ್ ಹೈಲ್ಯಾಂಡ್ಸ್ ಪ್ರದೇಶದಲ್ಲಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲು ವ್ಯಕ್ತಿಯೊಬ್ಬರಿಗೆ ಪೆಟ್ರೋಲ್ ಸಿಕ್ಕಿಲ್ಲ. ಇದರಿಂದಾಗಿ ಈ ದುರಂತ ಸಂಭವಿಸಿದೆ. ಕೊಲಂಬೊದಿಂದ ಸುಮಾರು 190 ಕಿ.ಮೀ. ದೂರದಲ್ಲಿರುವ ಹಲ್ದಮುಲ್ಲಾದಲ್ಲಿ ಘಟನೆ ನಡೆದಿದೆ. ಪೋಷಕರು ತಮ್ಮ ಮಗುವನ್ನು ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದ್ದರು. ಏಕೆಂದರೆ ಪುಟ್ಟ ಕಂದನಿಗೆ ಕಾಮಾಲೆ ಕಾಣಿಸಿಕೊಂಡಿತ್ತು. ಮಗು ಎದೆಹಾಲು ಸಹ ಕುಡಿಯುತ್ತಿರಲಿಲ್ಲ.
ನಿರಂತರ ಇಂಧನ ಬಿಕ್ಕಟ್ಟಿನಿಂದಾಗಿ, ಮಗುವಿನ ತಂದೆ ಗ್ಯಾಸೋಲಿನ್ ಗೆ ಗಂಟೆಗಳ ಕಾಲ ಕಳೆದಿದ್ದಾರೆ. ಅಂತಿಮವಾಗಿ, ಮಗುವನ್ನು ಹಲ್ದಮುಲ್ಲಾದ ಆಸ್ಪತ್ರೆಗೆ ಕರೆತಂದಾಗ, ವೈದ್ಯರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (ಇಟಿಯು) ವರ್ಗಾಯಿಸಬೇಕಾಯಿತು.
ಮಗುವನ್ನು ದಾಖಲಿಸಲು ವಿಳಂಬ ಮಾಡಿದ ಪರಿಣಾಮವಾಗಿ ಮಗುವಿನ ಆರೋಗ್ಯವು ತೀವ್ರವಾಗಿ ಹದಗೆಟ್ಟಿತು. ಇದರಿಂದಾಗಿ ಮಗು ಮೃತಪಟ್ಟಿದೆ.
ಶ್ರೀಲಂಕಾ ಪ್ರಸ್ತುತ ಗಂಭೀರವಾದ ವಿದ್ಯುತ್ ಮತ್ತು ಗ್ಯಾಸೋಲಿನ್ ಕೊರತೆಯನ್ನು ಎದುರಿಸುತ್ತಿದೆ. ಪೆಟ್ರೋಲಿಯಂ ಮತ್ತು ಇತರ ಅಗತ್ಯಗಳನ್ನು ಆಮದು ಮಾಡಿಕೊಳ್ಳಲು ಹಣವನ್ನು ಸಂಗ್ರಹಿಸಲು ಶ್ರಮಿಸುತ್ತಿದೆ.