alex Certify ಶಿವಮೊಗ್ಗ ಜಿಲ್ಲೆ: ಇಲ್ಲಿದೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಜಿಲ್ಲೆ: ಇಲ್ಲಿದೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಅಲೆ ಜಿಲ್ಲೆಗೂ ಬೀಸಿದ್ದು, ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಬಿಜೆಪಿ 3,ಜೆಡಿಎಸ್ 1 ಕ್ಷೇತ್ರದಲ್ಲಿ ವಿಜಯದ ನಗೆ ಬೀರಿವೆ.

ಕಳೆದ ಬಾರಿ ಬಿಜೆಪಿ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅದನ್ನು ಉಳಿಸಿಕೊಳ್ಳುವಲ್ಲಿ ಈ ಬಾರಿ ವಿಫಲವಾಗಿದೆ. ಆದರೂ ಕೂಡ ಮೂರು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.

ಕಾಂಗ್ರೆಸ್ ಕಳೆದ ಬಾರಿ 1 ಕ್ಷೇತ್ರದಲ್ಲಿ ಮಾತ್ರ ವಿಜಯ ಸಾಧಿಸಿದ್ದು, ಈಗ ಅದನ್ನು ಮೂರಕ್ಕೆ ಏರಿಸಿಕೊಂಡಿದೆ. ಹಾಗೆಯೇ ಜೆಡಿಎಸ್ ತನ್ನ ಖಾತೆಯನ್ನು ತೆರೆದುಕೊಂಡಿದೆ.

ಬಹು ನಿರೀಕ್ಷಿತ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ರಾಜೀನಾಮೆ ಕೊಟ್ಟು ಜೆಡಿಎಸ್ ಪಕ್ಷ ಸೇರಿದ್ದ ಆಯನೂರು ಮಂಜುನಾಥ್ ಅವರಿಗೆ ನಿಜಕ್ಕೂ ಮುಖಭಂಗವಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೇಶ್ ಅವರು ಹೊಸಬರಾಗಿದ್ದರೂ ಕೂಡ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಶಾರದಾ ಅಪ್ಪಾಜಿಯವರಿಗೆ ಅನುಕಂಪ ನೆರವಿಗೆ ಬರಲಿಲ್ಲ. ಇನ್ನು ಈ ಬಾರಿ ಮ್ಯಾಜಿಕ್ ಮಾಡಲಿದೆ ಎಂದು ನಿರೀಕ್ಷಿಸಿದ್ದ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಿರೀಕ್ಷಿತ ಯಶಸ್ಸು ಕಂಡಿಲ್ಲ.

ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ಪ್ರಯಾಸದ ಗೆಲುವು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡ ತೀವ್ರ ಪೈಪೋಟಿ ನೀಡಿದ್ದಾರೆ. ಬಹುಶಃ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಗೆಲುವಿನ ಸಾಧ್ಯತೆ ಇತ್ತು. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಅತ್ಯಲ್ಪ ಮತ ಪಡೆದಿದ್ದಾರೆ.

ಸೊರಬ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಮತ್ತು ಸಹೋದರಿ ಗೀತಾ ಶಿವರಾಜ್‌ಕುಮಾರ್ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದ್ದು., ಅತಿಹೆಚ್ಚಿನ ಮತಗಳಿಸಲು ನೆರವಾಗಿದೆ. ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪನವರಿಗೆ ಸೋಲಿನಿಂದ ನಿರಾಸೆಯಾಗಿದೆ.

ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಗೆಲುವಿನಲ್ಲಿ ಮಾಜಿ ಸಚಿವ ಕಾಗೋಡು ಪಾತ್ರ ಪ್ರಮುಖವಾಗಿದೆ. ರಾಜನಂದಿನಿ ಬಿಜೆಪಿ ಸೇರಿದ್ದು ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಬಿಜೆಪಿಯ ಹರತಾಳು ಹಾಲಪ್ಪ ಸೋಲುಂಡಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕಿಮ್ಮನೆ ರತ್ನಾಕರ್ ಅವರಿಗೆ ನಿರಾಸೆಯಾಗಿದೆ. ಆರ್.ಎಂ. ಮಂಜುನಾಥ ಗೌಡ ಅವರ ಸಹಕಾರವಿದ್ದರೂ ಆರಗ ಜ್ಞಾನೇಂದ್ರ ನಿರಾಯಾಸದ ಗೆಲುವು ಕಂಡಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮೋದಿ ಮ್ಯಾಜಿಕ್ ಯಾವುದೇ ಕೆಲಸ ಮಾಡಿಲ್ಲ. ಶಾರದಾ ಪೂರ‍್ಯಾ ನಾಯ್ಕ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಕೆ.ಬಿ. ಅಶೋಕ ನಾಯ್ಕ ಅವರ ಅಭಿವೃದ್ಧಿ ಕೆಲಸಗಳು ಕೈ ಹಿಡಿದಿಲ್ಲ. ಹರಸಾಹಸ ಮಾಡಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಡಾ. ಶ್ರೀನಿವಾಸ ಕರಿಯಣ್ಣ ಎರಡನೇ ಬಾರಿಗೂ ಮುಗ್ಗರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...