ಟೀಚರ್ ಆಜ್ಞೆಯಂತೆ ತಲಾ 100 ಬಸ್ಕಿ ಹೊಡೆದ 7 ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆ ಓಡಿಶಾದ ಪಟ್ನಾಗರ್ ನಲ್ಲಿ ನಡೆದಿದೆ. ಬಾಪೂಜಿ ಹೈಸ್ಕೂಲ್ ನ ಈ ವಿದ್ಯಾರ್ಥಿನಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸೆ ಬಳಿಕ ಬಾಲಕಿಯರು ಚೇತರಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿನಿಯರು ಶಾಲೆಗೆ ತಡವಾಗಿ ಆಗಮಿಸಿದ್ದರು. ಬೆಳಗಿನ ಪ್ರಾರ್ಥನೆಗೆ ಹಾಜರಾಗಿರಲಿಲ್ಲ. ಪ್ರೇಯರ್ ಮುಗಿದ ಬಳಿಕ ತರಗತಿಗೆ ಹಾಜರಾಗಿದ್ದರಿಂದ ಕೋಪಗೊಂಡ ಶಿಕ್ಷಕ ಬಿಕಾಶ್ ದರುವಾ ಎಂಬುವವರು, ತಲಾ 100 ಬಸ್ಕಿ ಹೊಡೆಯುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿದ್ದಾರೆ.
ಈ ವೇಳೆ 7 ವಿದ್ಯಾರ್ಥಿನಿಯರು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿತ್ತು ಅಂತ ಪಟ್ನಾಗರ್ ಉಪ-ವಿಭಾಗೀಯ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದ್ರೆ ವಿದ್ಯಾರ್ಥಿನಿಯರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಶಿಕ್ಷಣ ಸಚಿವ ಸಮೀರ್ ರಂಜನ್ ಆದೇಶಿಸಿದ್ದಾರೆ.