ಎನ್‌ಎಸ್‌ಜಿ ಕಮಾಂಡೋ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಫತೇಪುರ ಗ್ರಾಮದಲ್ಲಿ ಸಂಭವಿಸಿದೆ.
ಈ ದಾಳಿಯಲ್ಲಿ ಎನ್‌ಎಸ್‌ಜಿ ಕಮಾಂಡೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಬೇಜಾವಾಬ್ದಾರಿ ಮೆರೆಯುವ ಮೂಲಕ ದುಷ್ಕರ್ಮಿಗಳಿಗೆ ಪರೋಕ್ಷ ಸಾಥ್ ನೀಡಿದ್ದಾರೆ ಎಂದು ಕಮಾಂಡೋ ಆರೋಪಿಸಿದ್ದಾರೆ.
ಕಮಾಂಡೋರನ್ನು ರಕ್ಷಿಸಬೇಕೆಂದು ನಾವು ಹತ್ತಿರಕ್ಕೆ ಬರುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವುದರ ಜೊತೆಯಲ್ಲಿ ಲಾಠಿಯಿಂದ ದಾಳಿ ನಡೆಸಲು ಆರಂಭಿಸಿದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಎನ್‌ಎಸ್‌ಜಿ ಕಮಾಂಡೋ ತನ್ನ ಜೀವ ಉಳಿಸಿಕೊಳ್ಳಲು ಎಸ್ಎಸ್ಪಿಯನ್ನು ಸಂಪರ್ಕಿಸಿದ್ದಾರೆ. ದೇಶಕ್ಕೆ ಅತ್ಯುನ್ನತ ಮಟ್ಟದಲ್ಲಿ ಭದ್ರತೆ ಒದಗಿಸುವ ಎನ್ಸಿಜಿ ಸಿಬ್ಬಂದಿಗೇ ಸುರಕ್ಷತೆ ಇಲ್ಲ ಎಂದು ಕಮಾಂಡೋ ಆಕ್ರೋಶ ಹೊರ ಹಾಕಿದ್ದಾರೆ.
ದರೋಡೆಯ ಘಟನೆ ಸೇರಿದಂತೆ ಎರಡು ದಿನಗಳಲ್ಲಿ ಎನ್‌ಎಸ್‌ಜಿ ಕಮಾಂಡೋ ಮೇಲೆ ಎರಡು ಬಾರಿ ದಾಳಿ ಮಾಡಲಾಗಿದೆ, ಇದು ಪೊಲೀಸರ ನಡೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ.
ತನ್ನ ಸಹೋದರರಾದ ಸಂಜೀವ್ ಬದೌರಿಯಾ ಹಾಗೂ ಸೋದರಳಿಯ ಶಿವಾಂಶು ಬದೌರಿಯಾ ಜೊತೆಯಲ್ಲಿ ಇಟಾವಾ ಪೊಲೀಸ್ ಠಾಣೆ ತಲುಪಿದ ಎನ್‌ಎಸ್‌ಜಿ ಕಮಾಂಡೋ ರಾಜೀವ್ ಬದೌರಿಯಾ ಭೂ ವಿವಾದ ಸಂಬಂಧ ಗ್ರಾಮದ ಕೆಲ ಕಿಡಿಗೇಡಿಗಳ ತಮಗೆ ಥಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.