ರೈಲ್ವೆ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಅವಘಡಕ್ಕೆ ಸಿಲುಕಿದ ಸಂದರ್ಭದಲ್ಲಿ ರಕ್ಷಿಸುವ ಅನೇಕ ಉದಾಹರಣೆ ಇದೆ. ಇಂತಹ ನೂರಾರು ಪ್ರಕರಣಗಳಿದ್ದು, ವಿಡಿಯೋಗಳ ಕೂಡ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇಂತಹ ಪ್ರಕರಣಕ್ಕೆ ವ್ಯತಿರಿಕ್ತವಾಗಿ ಒಂದು ಘಟನೆ ನಡೆದಿದೆ.
ರೈಲ್ವೆ ನಿಲ್ದಾಣದ ಭದ್ರತಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಹೊಡೆಯುವ, ಬೂಟು ಕಾಲಿನಿಂದ ಮೈಕೈ ಜಖಂಗೊಳಿಸುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
ಈ ಘಟನೆ ಎಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ, ಆ ಭದ್ರತಾ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿದ್ದಾನೆ ಎಂಬುದು ಖಚಿತವಾಗಿದೆ.
ವೃದ್ಧನೊಬ್ಬನ ಮೇಲೆ ದಾಳಿ ನಡೆಸುವ ಭದ್ರತಾ ಸಿಬ್ಬಂದಿ, ಒಂದು ಹಂತದಲ್ಲಿ ಎರಡು ಕಾಲನ್ನು ಹಿಡಿದು, ದೇಹವನ್ನು ಟ್ರಾಕ್ನತ್ತ ಬಗ್ಗಿಸಿ ಹಿಂಸಿಸುವುದು ವಿಡಿಯೋದಲ್ಲಿ ಕಾಣಸಿಗುತ್ತದೆ. ಅಲ್ಲಿ ಕೆಲವು ಜನರಿದ್ದರೂ ಯಾರೂ ರಕ್ಷಿಸುವ ಗೋಜಿಗೆ ಹೋಗುವುದಿಲ್ಲ.
ನೆಟ್ಟಿಗರು ಈ ಹಲ್ಲೆಯನ್ನು ಖಂಡಿಸಿದ್ದಾರೆ. ಏಕೆ ಹೊಡೆಯಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ, ಆದರೆ, ಈ ರೀತಿ ಹೊಡೆಯಲು ಯಾರಿಗೂ ಅವಕಾಶವಿಲ್ಲ. ಭದ್ರತಾ ಸಿಬ್ಬಂದಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.