ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇವುಗಳ ಬೆಲೆ ಒಂದು ಗ್ರಾಂ ಚಿನ್ನಕ್ಕಿಂತಲೂ ಹೆಚ್ಚು.
ಯಮಶಿತಾ ಪಾಲಕ್ : ಪೌಷ್ಠಿಕಾಂಶವುಳ್ಳ ವಿಶಿಷ್ಟ ಸೊಪ್ಪು ಇದು. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಇದನ್ನು ಬೆಳೆಯಲಾಗುತ್ತದೆ. ಈ ಸೊಪ್ಪನ್ನು ಬೆಳೆಯಲು ಅತ್ಯಂತ ಕಾಳಜಿ ಬೇಕು ಜೊತೆಗೆ ತಾಳ್ಮೆಯೂ ಇರಬೇಕು. ಇದರ ಬೆಲೆ ಪ್ರತಿ ಪೌಂಡ್‌ಗೆ 13 ಡಾಲರ್, ಅಂದರೆ ಸುಮಾರು ಒಂದು ಸಾವಿರ ರೂಪಾಯಿ.
ಆಲೂಗಡ್ಡೆ : ಅರ್ಧ ಕೆಜಿ ಆಲೂಗಡ್ಡೆ ಬೆಲೆ ಹೆಚ್ಚೆಂದರೆ 25 ರೂಪಾಯಿ ಇರಬಹುದು. ಆದ್ರೆ ಫ್ರಾನ್ಸ್‌ನಲ್ಲಿ ಬೆಳೆಯುವ ಈ ವಿಶಿಷ್ಟ ಆಲೂಗಡ್ಡೆಯ ಬೆಲೆ ಅರ್ಧ ಕೆಜಿಗೆ 24,000 ರೂಪಾಯಿ. ಈ ವಿಶೇಷ ಆಲೂಗೆಡ್ಡೆಯನ್ನು ಪಶ್ಚಿಮ ಫ್ರಾನ್ಸ್‌ನಲ್ಲಿ ಬೆಳೆಯಲಾಗುತ್ತದೆ. ಇಷ್ಟು ದುಬಾರಿಯಾಗಲು ಕಾರಣ ಅದರ ಸೀಮಿತ ಲಭ್ಯತೆ. ಈ ವಿಶೇಷ ಆಲೂಗೆಡ್ಡೆಯ ಇಳುವರಿ ವರ್ಷದಲ್ಲಿ ಕೇವಲ 100 ಟನ್. ಇದರ ರುಚಿ ಕೂಡ ಪ್ರಚಂಡವಾಗಿರುತ್ತದೆ.
ಅಣಬೆ : ವಿಶ್ವದ ಅತ್ಯಂತ ದುಬಾರಿ ಮಶ್ರೂಮ್ ಇದು. ತೈವಾನ್‌ನ Yartsa Gunbu ಅತ್ಯಂತ ದುಬಾರಿ ಅಣಬೆ ಎಂದು ಹೆಸರುವಾಸಿಯಾಗಿದೆ. ಆದರೆ ಕೆಲವರು ಜಪಾನ್‌ನ Matsutake ಹೆಚ್ಚು ದುಬಾರಿ ಎಂದು ಪರಿಗಣಿಸುತ್ತಾರೆ. ಈ ವಿಶೇಷ ಅಣಬೆಯ ಬೆಲೆ ಭಾರತೀಯ ಕರೆನ್ಸಿಯಲ್ಲಿ ಕೆಜಿಗೆ ಸುಮಾರು 2.5 ಲಕ್ಷ ರೂಪಾಯಿ. ಇತರ ದುಬಾರಿ ಅಣಬೆಗಳೆಂದರೆ ಯುರೋಪಿಯನ್ ಬಿಳಿ ಟ್ರಫಲ್, ಮೊರೆಲ್ ಮತ್ತು ಚಾಂಟೆರೆಲ್ ಪ್ರಭೇದಗಳು.
ಪಿಂಕ್ ಲೆಟಿಸ್ : ಇದನ್ನು ಗುಲಾಬಿ ರಾಡಿಚಿಯೋ ಎಂದೂ ಕರೆಯುತ್ತಾರೆ. ಇದರ ರುಚಿ ಸ್ವಲ್ಪ ಕಹಿ. ಇದರ ಬೆಲೆ ಪ್ರತಿ ಪೌಂಡ್‌ಗೆ 10 ಡಾಲರ್‌ನಷ್ಟಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಕೆಜಿಗೆ ಸುಮಾರು 1600 ರೂಪಾಯಿ.
ವಾಸಬಿ: ಉತ್ತರ ಜಪಾನ್, ಚೀನಾ, ಕೊರಿಯಾ, ತೈವಾನ್ ಮತ್ತು ನ್ಯೂಜಿಲೆಂಡ್‌ನಲ್ಲಿ ಮಾತ್ರ ಈ ತರಕಾರಿಯನ್ನು ಬೆಳೆಸಲಾಗುತ್ತದೆ. ಇದರ ರುಚಿ ಅನನ್ಯವಾಗಿದೆ. ಅರ್ಧ ಕೆಜಿ ವಾಸಬಿಯ ಬೆಲೆ ಸುಮಾರು 5 ಸಾವಿರ ರೂಪಾಯಿ ಇದೆ.
ಹಾಪ್ ಶೂಟ್ಸ್: ಇದು ಕೂಡ ವಿಶ್ವದ ಬೆಲೆಬಾಳುವ ತರಕಾರಿಗಳಲ್ಲೊಂದು. ಈ ತರಕಾರಿ ಗಾತ್ರದಲ್ಲಿ ಚಿಕ್ಕದಾಗಿದೆ. ಅದನ್ನು ಕೊಯ್ಲು ಮಾಡುವುದು ತುಂಬಾ ಕಷ್ಟ. ಪ್ರಪಂಚದ ಹಲವು ತರಕಾರಿ ಮಾರುಕಟ್ಟೆಗಳಲ್ಲಿ ಇದರ ಬೆಲೆ ಕೆಜಿಗೆ 80 ಸಾವಿರದಿಂದ 85 ಸಾವಿರ ರೂಪಾಯಿ ಇದೆ. ಈ ಹಣದಲ್ಲಿ ಚಿನ್ನದ ಆಭರಣವನ್ನೇ ಖರೀದಿ ಮಾಡಬಹುದು. ಒಂದು ಮೂಟೆ ಹಾಪ್ ಶೂಟ್ಸ್ ಕೊಂಡುಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.