ಮುಂಬೈ: ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಕಾನೂನುಬಾಹಿರ ಚಟುವಟಿಕೆಯಲ್ಲ ಎಂದು ಕೋರ್ಟ್ ಆದೇಶಿಸಿದೆ.
ಅರ್ಜಿ ಕೈಗೆತ್ತಿಕೊಂಡ ಮುಂಬೈ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಂಜಶ್ರೀ ಜೆ ಘರತ್ ಅವರಿದ್ದ ಪೀಠ, ತನ್ನ ಆಸೆಗೆ ವಿರುದ್ಧವಾಗಿ ಪತಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ಮಹಿಳೆಯ ಆರೋಪವು ಕಾನೂನು ಪರಿಶೀಲನೆಗೆ ಒಳಪಡುವುದಿಲ್ಲ ಎಂದು ತಿಳಿಸಿದೆ. ಅಲ್ಲದೆ ಪತಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ‘’ಆರೋಪಿಯು ಪತಿಯಾಗಿರುವುದರಿಂದ ಅವರು ಯಾವುದೇ ಕಾನೂನುಬಾಹಿರ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ’’ ಎಂದು ನ್ಯಾಯಾಧೀಶರು ತಿಳಿಸಿದರು.
ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯು ಕಳೆದ ವರ್ಷ ನವೆಂಬರ್ 22 ರಂದು ವಿವಾಹವಾಗಿದ್ದರು. ಮದುವೆಯ ನಂತರ, ಆಕೆಯ ಪತಿ ಮತ್ತು ಆತನ ಕುಟುಂಬವು ತನ್ನ ಮೇಲೆ ನಿರ್ಬಂಧಗಳನ್ನು ಹೇರಲು ಆರಂಭಿಸಿತು ಮತ್ತು ಅವಹೇಳನ ಮಾಡಿದೆ. ತನ್ನನ್ನು ನಿಂದಿಸಿರುವುದ ಜೊತೆಗೆ ಹಣದ ಬೇಡಿಕೆಯನ್ನೂ ಇಡಲಾರಂಭಿಸಿದರು ಎಂದು ಮಹಿಳೆ ಪೊಲೀಸರಿಗೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ ಮದುವೆಯಾದ ಒಂದು ತಿಂಗಳ ನಂತರ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಜನವರಿ 2 ರಂದು, ದಂಪತಿ ಮುಂಬೈ ಸಮೀಪದ ಗಿರಿಧಾಮವಾದ ಮಹಾಬಲೇಶ್ವರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಮತ್ತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದರಿಂದ ಅಸ್ವಸ್ಥಗೊಂಡ ಮಹಿಳೆ ವೈದ್ಯರನ್ನು ಸಂಪರ್ಕಿಸಿದ್ದಾಳೆ. ಪರೀಕ್ಷೆಯ ನಂತರ, ಆಕೆಯ ಸೊಂಟದ ಕೆಳಗೆ ಪಾರ್ಶ್ವವಾಯುವಿನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದರು. ಇದಾದ ನಂತರವೇ ಮಹಿಳೆ ತನ್ನ ಪತಿ ಮತ್ತು ಇತರರ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ. ನಂತರ ಪತಿಯು ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇನ್ನು ವಿಚಾರಣೆ ವೇಳೆ ಪತಿ ಮತ್ತು ಆತನ ಕುಟುಂಬವು ತಮ್ಮನ್ನು ಇದರಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ವರದಕ್ಷಿಣೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮಹಿಳೆ ವಿರುದ್ಧವೇ ಪತಿ ಕೂಡ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆಕೆಯಿಂದ ಆರೋಪಿಸಲ್ಪಟ್ಟ ಕೆಲವು ಕುಟುಂಬ ಸದಸ್ಯರು ರತ್ನಗಿರಿಯಲ್ಲಿ ವಾಸಿಸುತ್ತಿದ್ದರು ಮತ್ತು ದಂಪತಿಯೊಂದಿಗೆ ಕೇವಲ ಎರಡು ದಿನ ಮಾತ್ರ ವಾಸವಾಗಿದ್ದರ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ಪ್ರಾಸಿಕ್ಯೂಷನ್ ವಿರೋಧಿಸಿತ್ತು. ಇನ್ನು ಮಹಿಳೆಯು ವರದಕ್ಷಿಣೆ ಬೇಡಿಕೆಯ ದೂರು ನೀಡಿದ್ದರೂ ಕೂಡ ಬೇಡಿಕೆ ಎಷ್ಟು ಎಂದು ಮಹಿಳೆ ತಿಳಿಸಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದಲ್ಲದೆ, ಬಲವಂತದ ಲೈಂಗಿಕತೆಯ ಕಾನೂನಿನ ಆಧಾರವನ್ನು ಹೊಂದಿಲ್ಲ ಎಂದ ನ್ಯಾಯಾಧೀಶರು, ಮಹಿಳೆಯು ಪಾರ್ಶ್ವವಾಯುವಿಗೆ ತುತ್ತಾಗಿರುವುದು ಅತ್ಯಂತ ದುರದೃಷ್ಟಕರ. ಆದಾಗ್ಯೂ, ಅರ್ಜಿದಾರರು (ಗಂಡ ಮತ್ತು ಕುಟುಂಬ) ಇದಕ್ಕೆ ಜವಾಬ್ದಾರರಾಗಿರುವುದಿಲ್ಲ. ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳ ಸ್ವರೂಪವನ್ನು ನೋಡಿದರೆ, ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ. ತನಿಖೆಯ ಸಮಯದಲ್ಲಿ ಅರ್ಜಿದಾರರು ಸಹಕರಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.