ಲಂಡನ್: ಮನೆಯಲ್ಲಿ ಕ್ರಿಸ್ಮಸ್ ಮರದ ಅಲಂಕಾರ ಮಾಡಿದ್ದರೆ ಯಾರಾದ್ರೂ ಅರೆಸ್ಟ್ ಆಗ್ತಾರಾ? ಖಂಡಿತ, ಇಲ್ಲ ಎನ್ನಬಹುದು. ಆದರೆ, ನಕ್ಷತ್ರ, ಬಾಬಲ್ಸ್, ಲೈಟಿಂಗ್ಸ್ ಅಲಂಕಾರ ಮಾಡುವುದನ್ನು ಬಿಟ್ಟು ಯಾರಾದ್ರೂ ಹಣ ಅಥವಾ ಡ್ರಗ್ಸ್ ನಿಂದ ಮಾಡಿದ್ರೆ ಏನಾಗಬಹುದು..? ಖಂಡಿತಾ ಜೈಲೂಟ ಫಿಕ್ಸ್ ಅಲ್ವಾ..? ಇಲ್ಲೊಂದೆಡೆ ಆಗಿದ್ದು ಅಷ್ಟೇ..
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಡ್ರಗ್ ಡೀಲರ್ ಒಬ್ಬ ತನ್ನ ಕ್ರಿಸ್ಮಸ್ ಟ್ರೀಯನ್ನು ಕೊಕೇನ್ ಮತ್ತು ನಗದುಗಳಿಂದ ಅಲಂಕರಿಸಿದ್ದಾನೆ. ಈ ಚಿತ್ರವನ್ನು ಕ್ಲಿಕ್ಕಿಸಿದ ಆತ, ಮೊಬೈಲ್ ನಲ್ಲಿ ಹಂಚಿಕೊಂಡಿದ್ದಾನೆ. ಇದು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕೂಡಲೇ ಆತನ ಮನೆಗೆ ಆರಕ್ಷಕರು ದಾಳಿ ಮಾಡಿದ್ದಾರೆ.
ವಾಯುವ್ಯ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿ, ಓವರ್‌ಬೋರ್ಡ್ ಎಂಬ ಪ್ರಮುಖ ಪೊಲೀಸ್ ಕಾರ್ಯಾಚರಣೆಯಲ್ಲಿ ಪೊರ್ಸೆಲ್ಲಿಯನ್ನು ಬಂಧಿಸಿದ್ದಾರೆ. ಈ ಮಾಹಿತಿಯನ್ನು ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಜನರು ಮಾದಕದ್ರವ್ಯವನ್ನು ಮಿತಿಮೀರಿ ಸೇವಿಸಿದ್ರೆ, ಹಬ್ಬದ ಮನೆಯು ಪೊಲೀಸ್ ಠಾಣೆಗೆ ದಾರಿ ಮಾಡಿದಂತಾಗುತ್ತದೆ ಎಂದು ತಿಳಿಸಿರುವ ಪೊಲೀಸರು, ನಗದು ಮತ್ತು ಮಾದಕ ದ್ರವ್ಯಗಳ ಪ್ಯಾಕೆಟ್‌ನೊಂದಿಗೆ ಅಲಂಕೃತವಾಗಿರುವ ಕ್ರಿಸ್ಮಸ್ ಟ್ರೀ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪೋರ್ಸೆಲ್ಲಿಯ ಹೊರತಾಗಿಯೂ ಪೊಲೀಸರ ಈ ಕಾರ್ಯಾಚರಣೆಯ ಸಮಯದಲ್ಲಿ ಇತರ ಎಂಟು ಜನರು ಸಹ ಸಿಕ್ಕಿಬಿದ್ದಿದ್ದಾರೆ. ಅವರಿಂದ ಸುಮಾರು 1.3 ಮಿಲಿಯನ್ ಯುರೋಗಳಷ್ಟು (ಅಂದಾಜು 10.90 ಕೋಟಿ ರೂ.) ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಕೆಲವರು ಸಂವಹನಕ್ಕಾಗಿ ಎನ್‌ಕ್ರಿಪ್ಟ್ ಮಾಡಿದ ತಂತ್ರಜ್ಞಾನವನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.