ತಮಿಳುನಾಡು ಸರ್ಕಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರ್ನಲ್ ಜಾನ್ ಪೆನ್ನಿಕ್ಯುಕ್ ಅವರ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅಲ್ಲದೇ, ಕರ್ನಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಪೆನ್ನಿಕ್ಯುಕ್ ಅವರ ತವರು ಕ್ಯಾಂಬರ್ಲಿಯಲ್ಲಿ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದು ಅವರು ಸ್ಟಾಲಿನ್ ತಿಳಿಸಿದ್ದಾರೆ.
ಕರ್ನಲ್ ಜಾನ್ ಪೆನ್ನಿಕ್ಯುಕ್ 1895 ರಲ್ಲಿ ಕೇರಳದ ಇಡುಕ್ಕಿಯಲ್ಲಿ ಮುಲ್ಲೈಪೆರಿಯಾರ್ ಅಣೆಕಟ್ಟನ್ನು ನಿರ್ಮಿಸಿದ ಬ್ರಿಟಿಷ್ ಇಂಜಿನಿಯರ್. ಅಣೆಕಟ್ಟನ್ನು ಪ್ರಸ್ತುತ ತಮಿಳುನಾಡು ಸರ್ಕಾರ ನಿರ್ವಹಿಸುತ್ತಿದ್ದು, ಈ ಡ್ಯಾಮ್ ಥೇಣಿ, ದಿಂಡಿಗಲ್, ರಾಮನಾಥಪುರಂ, ಶಿವಗಂಗೈ ಮತ್ತು ಮಧುರೈ ಜಿಲ್ಲೆಗಳಿಗೆ ನೀರನ್ನು ಒದಗಿಸುತ್ತದೆ.
ತಮಿಳುನಾಡಿನ ಈ ಐದು ಜಿಲ್ಲೆಗಳ ಜನರು ಪೆನ್ನಿಕ್ಯುಕ್ ಅವರಿಗೆ ವಿಶೇಷ ಗೌರವ ನೀಡಿದ್ದು, ಅನೇಕರಂತು ಇವರನ್ನ ದೇವರಂತೆ ಪೂಜಿಸುತ್ತಾರೆ. ಮುಲ್ಲೈಪೆರಿಯಾರ್ ಅಣೆಕಟ್ಟು ಯೋಜನೆಗೆ ಹೆಚ್ಚು ವೆಚ್ಚವಾಗ್ತಿದೆ ಎಂದು ಇಡೀ ಯೋಜನೆಯನ್ನೆ ಕೈ ಬಿಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತ್ತು.
ಆದರೆ ಈ ಯೋಜನೆಯನ್ನು ಪೂರ್ಣಗೊಳಿಸಲು ಪೆನ್ನಿಕ್ಯುಕ್ ಅವರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿದರು ಎಂಬ ಇತಿಹಾಸವಿದೆ. ಇಲ್ಲಿಯ ಮಂದಿಗೆ ಪೆನ್ನಿಕ್ಯುಕ್ ಅವರ ಮೇಲಿನ ಗೌರವ ಎಷ್ಟಿದೆ ಎಂದರೆ, ಥೇಣಿ ಜಿಲ್ಲೆಯಲ್ಲಿ ಜನವರಿ 15 ರಂದು ಪೊಂಗಲ್ ಜೊತೆಗೆ ಪೆನ್ನಿಕ್ಯುಕ್ ಅವರ ಜನ್ಮದಿನವನ್ನು ಆಚರಿಸುತ್ತಾರೆ.
ಇನ್ನು ಮುಲ್ಲೈಪೆರಿಯಾರ್ ಅಣೆಕಟ್ಟಿನ ಸಂಗ್ರಹ ಮಟ್ಟದ ವಿಷಯ, ಕೇರಳ ಮತ್ತು ತಮಿಳುನಾಡಿನ ನಡುವೆ ವಿವಾದವಾಗಿಯೆ ಉಳಿದಿದೆ.